ಬರ ಘೊಷಣೆಗೆ ಅಡ್ಡಿಯಾದ ಎನ್​ಡಿಆರ್​ಎಫ್ ಮಾನದಂಡ

HANAGAL MLA Shrinivas Mane
Published on

ಹಾನಗಲ್ಲ: ಎನ್​ಡಿಆರ್​ಎಫ್ ಮಾನದಂಡಗಳಿಂದಾಗಿ ಮೊದಲ ಪಟ್ಟಿಯಲ್ಲಿ ಹಾನಗಲ್ಲ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೊಷಿಸಲು ಅಡ್ಡಿಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಬುಧವಾರ ಪ್ರಕಟಣೆ ನೀಡಿರುವ ಅವರು, ಎನ್​ಡಿಆರ್​ಎಫ್ ಮಾನದಂಡಗಳ ಅನುಸಾರ ವಾಡಿಕೆಗಿಂತಲೂ ಬಹಳ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದರೆ ಮಾತ್ರ ಬರಗಾಲ ಘೊಷಣೆ ಸಾಧ್ಯವಿದೆ. ಆದರೆ, ಸಕಾಲಕ್ಕೆ ಮಳೆ ಬಾರದೇ ಹಾನಗಲ್ಲ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರ ಎನ್​ಡಿಆರ್​ಎಫ್ ಮಾನದಂಡಗಳನ್ನು ಬದಲಿಸಿದರೆ ಮಾತ್ರ ರೈತರಿಗೆ ಅನುಕೂಲ ಮಾಡಬಹುದಾಗಿದೆ ಎಂದು ಶಾಸಕ ಮಾನೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಜುಲೈ ತಿಂಗಳಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎನ್​ಡಿಆರ್​ಎಫ್ ಮಾನದಂಡಗಳನ್ನು ಬದಲಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿ ಎಂದು ಮನವಿ ಮಾಡಿಕೊಂಡರೂ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪ್ರಧಾನಿ ಭೇಟಿಗೆ ಸಮಯ ಕೇಳಿದರೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ರೈತ ಸಮೂಹ 2, 3 ಬಾರಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದು, ಪ್ರಮುಖ ಬೆಳೆ ಗೋವಿನಜೋಳ ಸಂಪೂರ್ಣವಾಗಿ ನಾಶವಾಗಿದೆ. ಭತ್ತ, ಅಡಕೆ ಸೇರಿದಂತೆ ಇತರ ಬೆಳೆಗಳೂ ಸಂಕಷ್ಟಕ್ಕೆ ಸಿಲುಕಿದ್ದು, ರೈತ ಸಮೂಹ ಕಂಗಾಲಾಗಿದೆ. ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಬರಗಾಲದ ವಾತಾವರಣವಿದ್ದರೂ ಮಾನದಂಡಗಳಿಂದ ಮೊದಲ ಪಟ್ಟಿಯಲ್ಲಿ ಬರಪೀಡಿತ ತಾಲೂಕು ಘೊಷಣೆಗೆ ಅಡ್ಡಿಯಾಗಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net