

ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತದ ಶಾಲಾ ಕಾಲೇಜುಗಳಲ್ಲಿ ಶುಕ್ರವಾರ ಸಂವಿಧಾನ ಓದು ನಿಮಿತ್ತ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.
ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ: ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ವಾಚನ ಜರುಗಿತು.
ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ‘ರಕ್ತಪಾತವಿಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಂತಹ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎನ್ನುವ ಮೂಲ ಮಂತ್ರದೊಂದಿಗೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ ಎಂದರು.
ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪುರೋಹಿತ, ಎಸ್.ಕೆ. ಕುಲ್ಜರಿ, ವಿ.ಎಸ್. ಜಾಧವ, ಎಸ್.ಎಚ್. ಮಾನ್ವಿ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ ಇತರರು ಇದ್ದರು.
ಬೂದಿಹಾಳ ಸರ್ಕಾರಿ ಶಾಲೆಯಲ್ಲಿ: ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಿ.ಕೆ. ಕೇಸರಿ ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತವು ವೈವಿಧ್ಯತೆ ಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ದೇಶ ವನ್ನು ಸಾರುತ್ತಿರುವ ಮಾದರಿ ರಾಷ್ಟ್ರವಾಗಿದೆ ಎಂದರು.
ಮುಖ್ಯಶಿಕ್ಷಕ ಡಾ. ಎಸ್.ವಿ. ತಮ್ಮನಗೌಡ್ರ, ಮಹಾದೇವಪ್ಪ ಕರಗಣ್ಣವರ, ಚಂದ್ರಶೇಖರ ದೇಸಾಯಿಪಟ್ಟಿ, ಶಂಕ್ರಮ್ಮ ದೇಸಾಯಿಗೌಡ್ರ ಇದ್ದರು.