ಸಂಸ್ಕೃತಿ, ಪರಂಪರೆ ಹೊಂದಿರುವ ರಾಷ್ಟ್ರ ಭಾರತ

15ss1udghatane
ರಥೋತ್ಸವ ಧಾರ್ಮಿಕ ಸಭೆಯನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು. ಸಿದ್ಧ್ದಗಂಗ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಹಾಂತ ಶಿವಲಿಂಗ ಸ್ವಾಮೀಜಿ, ಶಾಸಕ ಮಂಥರ್‌ಗೌಡ, ಬೆನಕ ಪ್ರಸಾದ್ ಇತರರಿದ್ದರು.
Published on

ಶನಿವಾರಸಂತೆ: ಭಾರತ ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಅಂಕನಹಳ್ಳಿ ಸಮಿಪದ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ದವೀರೇಶ್ವರ ಸ್ವಾಮಿಯ 13ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಮಹಾರಥೋತ್ಸವ ಮತ್ತು ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಚಿಂತನೆ, ಮನುಷ್ಯನ ನೆಮ್ಮದಿಗೆ ಜಾತ್ರಾ ಮಹೋತ್ಸವಗಳ ಸಹಕಾರಿ. ಭಾರತ ದೇಶವು ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿಯ ತಳಹದಿಯಲ್ಲಿದೆ. ಭಾರತದ ಸಂಸ್ಕೃತಿ, ಪರಂಪರೆಯು ಪ್ರಪಂಚದಲ್ಲಿ ಶಾಂತಿ ನೆಮ್ಮದಿ ಬಯಸುತ್ತದೆ. ಇದರಿಂದ ಇಡೀ ವಿಶ್ವ ಭಾರತವನ್ನು ತಿರುಗಿ ನೋಡುತ್ತಿದೆ. ಭಾರತದ ಧಾರ್ಮಿಕ ಮತ್ತು ಪರಂಪರೆಗೆ ಮೈಸೂರು ರಾಜರ ಕೊಡುಗೆ ಅಪಾರ. ಹೀಗಾಗಿಯೇ ಮೈಸೂರು ರಾಜರು ವಿಶ್ವದ ಗಮನ ಸೆಳೆದಿದ್ದರು ಎಂದರು.

ಮಠ ಮಾನ್ಯಗಳು ಮನಸಿನ ನೆಮ್ಮದಿ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಮನೆಹಳ್ಳಿ ಮಠವು ಈ ಭಾಗದ ಜನರ ಅಧ್ಯಾತ್ಮ, ಧಾರ್ಮಿಕ ಮತ್ತು ಮನಸಿಗೆ ನೆಮ್ಮದಿ ನೀಡುವ ಕೇಂದ್ರವಾಗಿದೆ. ಮಠದ ಸ್ವಾಮೀಜಿ ಅವರ ಧಾರ್ಮಿಕ ಚಿಂತನೆಯಿಂದ ಮಠವು ಸಾಮಾಜಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಧಾರ್ಮಿಕ ಕೇಂದ್ರಗಳ ಮಾರ್ಗದರ್ಶನ ಅಗತ್ಯ ಇದೆ. ಧಾರ್ಮಿಕ ಪರಂಪರೆಯನ್ನು ಹೊಂದಿರುವ ನಮ್ಮ ರಾಷ್ಟ್ರವು ಶೈಕ್ಷಣಿಕ, ವೈಜ್ಞಾನಿಕ, ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಧಾರ್ಮಿಕ ಆಚರಣೆ, ಜಾತ್ರಾ ಮಹೋತ್ಸವದ ಆಚರಣೆಗಳು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಈ ದಿಸೆಯಲ್ಲಿ ನಾವೆಲ್ಲರೂ ಭಾರತದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಜನರ ನೆಮ್ಮದಿ ಬದುಕಿಗೆ ಮಠ-ಮಂದಿರಗಳು ಅಗತ್ಯ. ಗಡಿ ಭಾಗದಲ್ಲಿರುವ ಮನೆಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ನಾನು ಸಹ ಚುನಾವಣೆ ಸಂದರ್ಭದಲ್ಲಿ ಮಠಕ್ಕೆ ಬಂದು ಶ್ರೀ ಕೇತ್ರದ ಆಶೀರ್ವಾದ ಪಡೆದುಕೊಂಡಿದ್ದೆ ಎಂದು ಸ್ಮರಿಸಿದರು.

ಈ ಮಠದ ಅಭಿವೃದ್ಧಿಗೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ನೀಡುವ ಇದೇ ವೇಳೆ ಭರವಸೆ ನೀಡಿದ ಶಾಸಕ ಡಾ.ಮಂತರಗೌಡ, ಮುಂದಿನ ದಿನದಲ್ಲಿ ನನ್ನ ಕ್ಷೇತ್ರದ ವಿವಿಧ ಮಠಗಳಿಗೂ ಸರ್ಕಾರದಿಂದ ಅನುದಾನ ನೀಡುವುದಾಗಿ ಮಾಹಿತಿ ನೀಡಿದರು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ದಾನಿ ಮತ್ತು ಶಿವಮೊಗ್ಗ ಎಂಎಲ್‌ಸಿ ಭಾರತಿ ಶೆಟ್ಟಿ, ಬೇಲೂರು ಶಾಸಕ ಸುರೇಶ್ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಎಂ.ಆರ್.ದೇವಪ್ಪ, ವಿರೂಪಾಕ್ಷಯ್ಯ, ವಿಶ್ವಕಪ್ ವಿಜೇತೆ ಚೈತ್ರಾ, ಮಿಲನಾ ಭರತ್, ಉಳುವಂಗಡ ಕಾವೇರಿ ಉದಯ್, ಜನಾರ್ದನ್, ಧರ್ಮಪ್ಪ, ಲೋಕೇಶ್ ಸುವರ್ಣ, ಚಂದ್ರಮೋಹನ್, ರಾಜಾರಾಮ್, ಶ್ರೇಯಾ, ಕೆ.ವಿ.ಪರಮೇಶ್, ರವಿಸುಂದರ್, ಮಾದಣ್ಣ, ಯೋಗಣ್ಣ ಅವರನ್ನು ಸನ್ಮಾನಿಸಲಾಯಿತು.

ತಪೋಕ್ಷೇತ್ರ ಮನೆಹಳ್ಳಿ ಮಠಾದೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮಿ, ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ, ಕಲ್ಲುಮಠದ ಮಹಂತಸ್ವಾಮಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ಐಪಿಎಸ್ ಅಧಿಕಾರಿ ಬೇನಕ ಪ್ರಸಾದ್, ಮುಖಂಡರಾದ ಎಚ್.ಎಸ್.ಚಂದ್ರಮೌಳಿ, ಶಿವಪ್ಪ, ಹಾಲಪ್ಪ, ಪುಷ್ಪಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net