

ಸಿಂಧನೂರು: ಕನ್ನಡ ನಾಡು ಸರ್ವಜನಾಂಗದ ಬೀಡು. ಕನ್ನಡಿಗರು ಹೃದಯ ವೈಶಾಲ್ಯತೆ ಹೊಂದಿದ್ದು, ಸ್ವಾಭಿಮಾನದಿಂದ ಬದುಕು ನಡೆಸುವರಾಗಿದ್ದಾರೆ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹರ್‌ಘರ್ ತಿರಂಗಾ ಮಾದರಿಯಲ್ಲಿ ಸೋಮವಾರ ತಾಲೂಕು ಆಡಳಿತದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡು, ನುಡಿ, ಜಲದ ವಿಚಾರಕ್ಕಾಗಿ ಸದಾ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಹಗಲುವೇಷ ಕಲಾವಿದರು, ಚರ್ಮ ವಾದ್ಯ, ಬಡಿಬೇಸ್ ಶಾಲಾ ವಿದ್ಯಾರ್ಥಿಗಳ ಕೋಲಾಟಕ್ಕೆ ಮೆರುಗು ನೀಡಿದವು. ಶಾಸಕ ವೆಂಕಟರಾವ ನಾಡಗೌಡ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕುಣಿದು ಕುಪ್ಪಳಿಸಿದರು. ಹಳೆಯ ಬಜಾರ್‌ನಲ್ಲಿ ಜೈನ ಸಮಾಜದವರು ಜ್ಯೂಸ್ ಹಾಗೂ ಬಾಳೆಹಣ್ಣು ನೀಡಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ ಆಚಾರ್ಯ, ವಿವಿಧ ಇಲಾಖೆಗಳ ತಾಲೂಕು ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪ್ರಮುಖರು, ಶಿಕ್ಷಕರು, ಉಪನ್ಯಾಸಕರು ಇದ್ದರು.