

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ 370 ಹಾಗೂ ಎನ್‌ಡಿಎ ಸೇರಿ 500 ಸೀಟು ಗೆದ್ದು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಬಿಜೆಪಿ ರಾಜ್ಯವಕ್ತಾರ ಮೋಹನ್ ವಿಶ್ವವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾಜ್ಯಕ್ಕೆ ಗೃಹ ಸಚಿವ ಅಮಿತಾ ಶಾ ಅಗಮಿಸಲಿದ್ದು, ದೊಡ್ಡ ಮಟ್ಟದ ಚುನಾವಣಾ ರ‌್ಯಾಲಿಗಳನ್ನು ನಡೆಸಲಿದ್ದಾರೆ. 60 ವರ್ಷದಿಂದ ಪರಿಹಾರವಾಗದ ಸಮಸ್ಯೆಗಳನ್ನು 10 ವರ್ಷದ ಬಿಜೆಪಿ ಆಡಳಿತದ ಅವಧಿಯಲ್ಲಿ ಪರಿಹರಿಸಲಾಗಿದೆ. ಪ್ರಧಾನಿ ಮೋದಿ ದೇಶವನ್ನು 5ನೇ ಆರ್ಥಿಕತೆಗೆ ತಂದಿದ್ದಾರೆ. 2027ರ ವೇಳೆಗೆ ದೇಶವನ್ನು 3ನೇ ಆರ್ಥಿಕತೆಗೆ ತೆಗೆದುಕೊಂಡು ಹೋಗಲಿದ್ದಾರೆ. ಈ ಮೂಲಕ ದೇಶ ವಿಶ್ವಗುರು ಆಗಲಿದೆ ಎಂದು ಬಣ್ಣಿಸಿದರು.
ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ, ಮಹಿಳಾ ಶೌಚಗೃಹ ನಿರ್ಮಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಧಾನಿ ಮೋದಿ 4 ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜೆಪಿ ಅದಾನಿ, ಅಂಬಾನಿಗಳಂತಹ ಉದ್ಯಮಿಗಳ ಪರ ಎಂದು ಟೀಕಿಸುವ ಕಾಂಗ್ರೆಸ್‌ಗೆ ಬಡವರ ಪರವಾದ ಯೋಜನೆಗಳು ಕಾಣಿಸುವುದಿಲ್ಲ ಎಂದು ಆರೋಪಿಸಿದರು.
ಇಂಡಿಯಾ ಒಕ್ಕೂಟಕ್ಕೆ ಈವರೆಗೆ ತನ್ನ ನಾಯಕ ಯಾರು ಎಂದು ಗುರುತಿಸಲು ಸಾಧ್ಯವಾಗಿಲ್ಲ. ಇಂಡಿಯಾ ಒಕ್ಕೂಟದ ಕೆಲ ನಾಯಕರು ತಮ್ಮ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಪೊಲೀಸರು ಬಾಂಡ್ ಕೊಡಿ ಎಂದು ಕೇಳುತ್ತಾರೆ. ಇಂಥ ದಮನಕಾರಿ ನೀತಿಯನ್ನು ಕೂಡಲೇ ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಮಹೇಶ್ ಒಡೆಯರ್, ಎಚ್.ಎಸ್.ಪುಟ್ಟಸ್ವಾಮಿ, ವಿಜೇಂದ್ರ ಮತ್ತಿತರರಿದ್ದರು.