ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ನಿಶ್ಚಿತ : ಎಸ್. ಬಾಲರಾಜ್

mp election
Published on

ಮೈಸೂರು: ನಿಶ್ಚಿತವಾಗಿಯೂ ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮನವಿ ಮಾಡಿದರು.

ವರುಣ ವಿಧಾನಸಭಾ ಕ್ಷೇತ್ರದ ಗರ್ಗೆಶ್ವರಿ, ಹಾರೋಹಳ್ಳಿ ಮೆಲ್ಲಹಳ್ಳಿ, ಭೈರಾಪುರ ಮಹಾಶಕ್ತಿ ಕೇಂದ್ರದಲ್ಲಿ ಶುಕ್ರವಾರ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ಕ್ಷೇತ್ರದ ಶಾಸಕನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. 20 ವರ್ಷಗಳಿಂದ ನಾನಾ ಕಾರಣಕ್ಕಾಗಿ ಅವಕಾಶದಿಂದ ವಂಚಿತನಾಗಿದ್ದ ನನಗೆ ಇದೀಗ ಲೋಕಸಭೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಸರ್ಕಾರ ತಂದಿರುವ ಹಲವಾರು ಯೋಜನೆಗಳು ಬಡವರ ಮನೆ ತಲುಪುತ್ತಿದೆ. ಬಡವರ ಮನೆಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡ ಲಾಗಿದೆ. ಪ್ರತಿಯೊಂದು ರಂಗದಲ್ಲೂ ದೇಶ ಅಭಿವೃದ್ಧಿ ಕಾಣುತ್ತಿದ್ದು, ದೇಶ ಆರ್ಥಿಕವಾಗಿ ಮುಂದುವರಿದು ಜಗತ್ತಿನಲ್ಲೇ ಗಮನ ಸೆಳೆದಿದೆ ಎಂದರು.

ಕಾಂಗ್ರೆಸ್ ಸ್ವಾತಂತ್ರೃ ಬಂದ ದಿನದಿಂದಲೂ ದಲಿತರು, ಹಿಂದುಳಿದ, ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡಿದೆಯೇ ಹೊರತು ನಿಜವಾದ ಅಭಿವೃದ್ಧಿ ಮಾಡಲಿಲ್ಲ. ಆದರೆ, ಮೋದಿ ದೇಶದ ಪ್ರತಿಯೊಬ್ಬರಿೂ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಮತದಾರರ ಮನೆ ಮನೆಗೆ ತೆರಳಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿ ಬೂತ್‌ಗಳಲ್ಲಿ ಲೀಡ್ ಬರುವಂತೆ ಮಾಡಬೇಕು. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಹೇಳಬೇಕಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿದೆ. ದಲಿತರ ವಿರೋಧಿ ಯಾರಾದರು ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಗಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭ ಬಿಜೆಪಿ ಪ್ರಭಾರಿ ಎಸ್. ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್. ಸತೀಶ್, ಮಂಡಲ ಅಧ್ಯಕ್ಷ ಸತೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net