

ಸವಣೂರ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಿತ್ರ ಪಕ್ಷಗಳ ನಾಯಕರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಕೋಮು ದ್ವೇಷ ಹುಟ್ಟಿಸುವ ಪೋಸ್ಟ್ ಹಾಕಿದ್ದ ಅನ್ಯ ಕೋಮಿನ ಯುವಕನ ವಿರುದ್ಧ ಸವಣೂರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಾಲೂಕಿನ ತೆಗ್ಗಿಹಳ್ಳಿಯ ಇಮಾಮಸಾಬ ಇಸ್ಮಾಯಿಲಸಾಬ ಬಣಗಾರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈ ಕುರಿತು ಪೊಲೀಸರು ಸ್ವತಃ ದೂರು ದಾಖಲಿಸಿಕೊಂಡಿದ್ದು ಆರೋಪಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಿತ್ರ ಪಕ್ಷದವರು ನಿಂತಿದ್ದ ಫೋಟೊ ಬಳಸಿಕೊಂಡು ‘ಇದರಲ್ಲಿ ಕೇಸರಿ ಶಾಲು, ಕೋಟು, ಲುಂಗಿ, ಲೆಗ್ಗಿನ್ಸ್ ಹುಡುಕಿಕೊಟ್ಟವರಿಗೆ 15 ಲಕ್ಷ ರೂ. ಬಹುಮಾನ’ ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹರಿಬಿಟ್ಟಿದ್ದಾನೆ. ಇದು ಸಮಾಜದಲ್ಲಿ ಭಿನ್ನ ವರ್ಗಗಳ ಮಧ್ಯೆ ದ್ವೇಷ ಮೈಮನಸ್ಸು ಹುಟ್ಟಿಸುವಂತಹ ಪೋಸ್ಟ್ ಆಗಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.