ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವು

oppo_2
ಮದ್ದೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರ ಸ್ವಾಮಿ ಮಾತನಾಡಿದರು. ಡಿ.ಸಿ.ತಮ್ಮಣ್ಣ, ಎಸ್.ಪಿ.ಸ್ವಾಮಿ, ಡಾ.ಇಂದ್ರೇಶ್, ಕೃಷ್ಣೇಗೌಡ ಇದ್ದರು.
Published on

ಮದ್ದೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮನ್‌ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಅವರಿಂದ ಅಭಿನಂದನೆ ಸ್ವೀಕರಿಸಿ ಬುಧವಾರ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆಯಿದ್ದು ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ಸಂಸದೆ ಸುಮಲತಾ ಅಂಬರೀಷ್ ಅವರು ಬೆಂಬಲ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇಷ್ಟರಲ್ಲೇ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಅವರು ಸೇರ್ಪಡೆಯಾಗಲಿದ್ದಾರೆ ಎಂದ ಅವರು, ಬಳಿಕ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವುದರ ಬಗ್ಗೆ ಅವರು ನಿರ್ಧರಿಸಿ ತಿಳಿಸಲಿದ್ದಾರೆ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮದ್ದೂರಿಗೆ ಆಗಮಿಸಿದ್ದ ವೇಳೆ ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜಿಲ್ಲೆಗೆ ನನ್ನ ಹಾಗೂ ಜೆಡಿಎಸ್‌ನ ಕೊಡುಗೆ ಏನು? ಎಂಬುದು ಜನತೆಗೆ ಗೊತ್ತಿದೆ. ಅಷ್ಟಕ್ಕೂ ಜಿಲ್ಲೆಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಬಳಿಕ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಗ್ರಾಮದೇವತೆ ಶ್ರೀ ಮದ್ದೂರಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಬಳಿಯಿರುವ ಮಾಜಿ ಶಾಸಕ ದಿ.ಎಂ.ಎಸ್.ಸಿದ್ದರಾಜು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಹತ್ತಿರದಲ್ಲೇ ಇರುವ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

ನಂತರ ಸೋಮನಹಳ್ಳಿಯಲ್ಲಿರುವ ದಿ.ಎಸ್.ಎಂ.ಶಂಕರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಬೆಂಗಳೂರಿಗೆ ತೆರಳಿದರು.

ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಹಾಗೂ ಮನ್‌ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ಜಿಪಂ ಮಾಜಿ ಸದಸ್ಯ ಬೋರಯ್ಯ, ಕೃಷ್ಣೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮಹದೇವು, ಮುಖಂಡರಾದ ಸತೀಶ್, ಶ್ವೇತಾ, ಮಮತಾರಾಂಖ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net