

ಮೈಸೂರು: ಎನ್‌ಡಿಎ ಅಭ್ಯರ್ಥಿಗೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲೀಡ್‌ಗಿಂತ ಒಂದು ಮತ ಹೆಚ್ಚು ಲೀಡ್ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಪ್ರೀತಂ ಜೆ.ಗೌಡ, ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವುದಾಗಿ ಪರೋಕ್ಷವಾಗಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯುಗಾದಿ ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ. ನಮ್ಮ ಯಾವ ಬೆಂಬಲಿಗರೂ ಕಾಂಗ್ರೆಸ್‌ಗೆ ಹೋಗಿಲ್ಲ. ಈಗ ಹೋಗಿರುವವರು ಬೂತ್ ಅಧ್ಯಕ್ಷ ಕೂಡ ಅಲ್ಲ. ಯಾರೋ ಟೀ ಕುಡಿದ ಕೂಡಲೇ, ಪ್ರಚಾರ ಪತ್ರ ಕೊಟ್ಟ ಕೂಡಲೇ ಅವರು ಕಾಂಗ್ರೆಸ್ ಆಗುವುದಿಲ್ಲ. ನಾವೇ ಕಾಂಗ್ರೆಸ್‌ನವರನ್ನು ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿಂದ ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸುವ ಅಗತ್ಯವೂ ಇಲ್ಲ. ಕಾರ್ಯಕರ್ತರ ಸಭೆ ನಡೆಸಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ, ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದರು.
ಶಮನವಾಗದ ಮುನಿಸು?: ಅಭ್ಯರ್ಥಿಯ ಅಪ್ಪನಿಗಿಂತ ನಾನು ಒಂದು ವೋಟು ಹೆಚ್ಚು ಕೊಡಿಸದಿದ್ದರೆ ಕೇಳಿ ಎಂದ ಪ್ರೀತಂಗೌಡ ಹಾಸದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಒಮ್ಮೆಯೂ ಹೇಳಲಿಲ್ಲ. ಇತ್ತ ಪ್ರಜ್ವಲ್ ಹೆಸರನ್ನು ಹೇಳಲಿಲ್ಲ. ಪತ್ರಕರ್ತರು ಹಲವು ಬಾರಿ ಪ್ರಶ್ನೆ ಮಾಡಿದರೂ ಸರಿಯಾದ ಉತ್ತರ ನೀಡದೆ ‘ಈಗಾಗಲೇ ಸಭೆ ನಡೆಸಿದ್ದೇನೆ. ಅಭ್ಯರ್ಥಿಯ ಪರ ಕೆಲಸ ಮಾಡುತ್ತೇವೆ’ ಎಂದಷ್ಟೇ ಹೇಳಿದರು.