ಮಕ್ಕಳಿಗೆ ಕಾವ್ಯ, ಕತೆ ಓದಲು ಪ್ರೇರೇಪಿಸಿ

h10-kle
Published on

ಹುಬ್ಬಳ್ಳಿ: ಕನ್ನಡ ವಿಭಾಗ ಮತ್ತು ಕ್ರಿಯಾಶೀಲ ತೇಜಸ್ವಿ ವೇದಿಕೆ ಆಶ್ರಯದಲ್ಲಿ ಇಲ್ಲಿಯ ವಿದ್ಯಾನಗರದ ಜೆ.ಜಿ. ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ದಿ. ಪೂರ್ಣಚಂದ್ರ ತೇಜಸ್ವಿಯವರ 86 ಜನ್ಮದಿನೋತ್ಸವ ಹಾಗೂ ಬೋಳೇಶಂಕರ ಮತ್ತು ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ, ಬಹುಮಾನ ವಿತರಣೆ ಕಾರ್ಯಕ್ರಮ ಶುಕ್ರವಾರ ಜರುಗಿತು.

ಪತ್ರಕರ್ತ ಸಿದ್ದನಗೌಡ ಪಾಟೀಲ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಕಾವ್ಯ ಓದಲು ಪ್ರೇರೇಪಿಸಬೇಕು. ಕಾವ್ಯ ಮತ್ತು ಕತೆಯೊಳಗಿನ ಗಮ್ಯ ಅರಿತುಕೊಳ್ಳಬೇಕು. ಇವುಗಳಲ್ಲಿ ಜೀವನ ಸಂದೇಶವಲ್ಲದೇ ಪ್ರೋತ್ಸಾಹ, ಹುರುಪು ತುಂಬುವ ಸಾಲುಗಳು ಇರುತ್ತವೆ ಎಂದರು.

ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ನದ ಭಾಷೆ ಮರೆಯಬಾರದು. ಮರೆತರೆ ನಾಡು-ನುಡಿಗೆ ಕುತ್ತಾಗಲಿದೆ. ಹೆಚ್ಚು ಕನ್ನಡ ಭಾಷೆ ಬಳಕೆ, ಅನುಷ್ಠಾನಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ಉಪನ್ಯಾಸಕಿ ಪ್ರೊ. ಮಲ್ಲಮ್ಮ ಯಾಟಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ತೇಜಸ್ವಿಯವರ ಸಾಹಿತ್ಯ ಯುವಕರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸ್ಪರ್ಧಾತ್ಮಕ ಯುಗದಲ್ಲೂ ಅವರ ಸಾಹಿತ್ಯದ ಪ್ರಭಾವ ಕುಂದಿಲ್ಲ ಎಂದರು.

ವಿಜಯನಗರದ ರಂಗಾರಾಧನ ತಂಡ ಬೋಳೆಶಂಕರ ಮತ್ತು ಕೃಷ್ಣೇಗೌಡರ ಆನೆ ನಾಟಕಗಳನ್ನು ಪ್ರದರ್ಶಿಸಿತು. ಕಾವ್ಯ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಚಾರ್ಯ ಡಾ. ದತ್ತು ವಾಘಮೋಡೆ, ರಂಗ ನಿರ್ದೇಶಕ ಲಕ್ಷ್ಮಣ ಪೀರಗಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net