ವಿದೇಶಿ ಡ್ರಗ್ಸ್ ಪೆಡ್ಲರ್​ಗಳನ್ನು 1 ಕಿ.ಮೀ. ಚೇಸ್ ಮಾಡಿದ ಎನ್​ಸಿಬಿ; ಇಬ್ಬರ ಬಂಧನ

Peddler
Published on

ಬೆಂಗಳೂರು: ವಿದೇಶಿ ಅಂಚೆ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳನ್ನು ಕೇಂದ್ರ ಮಾದಕ ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದೆ. ಕೀನ್ಯಾ ದೇಶದ ರಾಮಲಾ ಶೇಡಫಾ (30) ಮತ್ತು ಇಮ್ಯಾನ್ಯುಯಲ್ ಮೈಕೆಲ್ (32) ಬಂಧಿತರು. 55 ಲಕ್ಷ ರೂ. ಮೌಲ್ಯದ 300 ಎಂಡಿಎಂಎ ಮಾತ್ರೆಗಳು, 240 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿ.17ರಂದು ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ನೆದರ್‌ಲ್ಯಾಂಡ್ ಮತ್ತು ಇಥಿಯೋಪಿಯಾದಿಂದ 2 ಪಾರ್ಸೆಲ್‌ಗಳು ಬಂದಿದ್ದವು. ಈ ಪೈಕಿ ಒಂದರ ಗಾತ್ರ ಮತ್ತು ತೂಕದಲ್ಲಿ ಅನುಮಾನಗೊಂಡು ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಬಟ್ಟೆಗಳಲ್ಲಿ ಸುತ್ತಿ ಎಂಡಿಎಂ ಮಾತ್ರೆಗಳನ್ನು ಇಡಲಾಗಿತ್ತು. ಇಥಿಯೋಪಿಯಾದಿಂದ ಖಾಕಿ ಬಣ್ಣದ ಪಾರ್ಸೆಲ್‌ನ ಒಳಭಾಗದಲ್ಲಿ ಕೊಕೇನ್ ಪುಡಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಮೇಲ್ಭಾಗದಲ್ಲಿ ಬೇರೆ ಬೇರೆ ವಸ್ತುಗಳನ್ನು ಇಟ್ಟಿದ್ದರು. ಡಿ.18ರಂದು ಬೆಂಗಳೂರು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ಗುವಾಟೆ ನೇತೃತ್ವದ ತಂಡ ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿ ಬಳಿ ಆರೋಪಿಗಳ ಮೇಲೆ ನಿಗಾವಹಿಸಿದ್ದರು.

ಆರೋಪಿಗಳು ಪಾರ್ಸೆಲ್ ಸ್ವೀಕರಿಸಲು ಅಂಚೆ ಕಚೇರಿ ಬಳಿಗೆ ಬಂದಾಗ ವಶಕ್ಕೆ ಪಡೆಯಲು ಮುಂದಾದ ಅಧಿಕಾರಿಗಳನ್ನು ತಳ್ಳಿ ತಪ್ಪಿಸಿಕೊಂಡಿದ್ದರು. ಸುಮಾರು ಒಂದು ಕಿಲೋ ಮೀಟರ್‌ನಷ್ಟು ದೂರ ಆರೋಪಿಗಳನ್ನು ಬೆನ್ನಟ್ಟಿದ ಎನ್‌ಸಿಬಿ ತಂಡ ಅವರನ್ನು ಬಂಧಿಸಿದೆ. ಈ ವೇಳೆ ಅಧಿಕಾರಿ ಸುನೀಲ್ ಪರೀವಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳ ಪಾಸ್‌ಪೋರ್ಟ್ ಮತ್ತು ವೀಸಾ ವಶಕ್ಕೆ ಪಡೆಯಲಾಗಿದ್ದು, ವಿದ್ಯಾರ್ಥಿ ಮತ್ತು ಪ್ರವಾಸಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದರು. ಅದು ನಕಲಿ ಎಂಬುದು ಗೊತ್ತಾಗಿದೆ. ವರ್ಷಾಚರಣೆ ಸಂದರ್ಭದಲ್ಲಿ ಪಾರ್ಟಿ ಹಾಗೂ ಹೋಟೆಲ್‌ಗಳಲ್ಲಿ ಮಾರಾಟಕ್ಕೆ ಮುಂದಾಗಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net