

ಬೆಂಗಳೂರು: ಬಿಬಿಎಂಪಿ ಕಾರ್ಪೋರೇಟರೊಬ್ಬರ ಮಗನಿಗೆ ಮಾದಕದ್ರವ್ಯ ನಿಯಂತ್ರಣ ದಳ (ಎನ್ಸಿಬಿ)ದಿಂದ ನೋಟಿಸ್ ನೀಡಲಾಗಿದೆ.
ಎನ್ಸಿಬಿಯಿಂದ ಮುಂಬೈನಲ್ಲಿ ಬಂಧಿಯಾಗಿರುವ ಮಹಮ್ಮದ್ ರೆಹಮಾನ್ ಸಂಪರ್ಕದಲ್ಲಿ ರಾಜಾಜಿನಗರದ ಕಾರ್ಪೋರೇಟರ್ ಕೇಶವ ಮೂರ್ತಿ ಮಗ ಯಶಸ್ ಇರುವ ಬಗ್ಗೆ ಮಾಹಿತಿ ತಿಳಿದಿದೆ. ಹೀಗಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಎನ್ಸಿಬಿ ಅಧಿಕಾರಿಗಳು ಕಾರ್ಪೋರೇಟರ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ.
ಸದ್ಯ ವಿಚಾರಣೆಗೆ ಹಾಜರಾಗಲು ಕಾರ್ಪೋರೇಟರ್ ಮಗನಿಗೆ ಎನ್ಸಿಬಿ ನೋಟಿಸ್ ನೀಡಿದೆ. ಮುಂಬೈ ಡ್ರಗ್ಸ್ ಪೆಡ್ಲರ್ ಮಹಮದ್ ರೆಹಮಾನ್ ಜತೆ ಸೇರಿ ಡ್ರಗ್ಸ್ ಖರೀದಿ ಮತ್ತು ಡ್ರಗ್ಸ್ ಮಾರಾಟ ಮಾಡಿರುವ ಅನುಮಾನದ ಮೇಲೆ ನೋಟಿಸ್ ನೀಡಲಾಗಿದೆ.
ಮುಂಬೈನ ಎನ್ಸಿಬಿ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಡ್ರಗ್ಸ್ ಪೆಡ್ಲಿಂಗ್ ಮಾಡಿರುವುದಕ್ಕೆ ಹಲವು ಬಾರಿ ಹಣ ವರ್ಗಾವಣೆ ಮಾಡಿರುವ ಆಧಾರದ ಮೇಲೂ ನೋಟಿಸ್ ನೀಡಲಾಗಿದೆ. ಸದ್ಯ ಕೇಶವ ಮೂರ್ತಿ ಮಗ ಯಶಸ್ ನಾಪತ್ತೆಯಾಗಿದ್ದು, ಆತನಿಗಾಗಿ ಎನ್ಸಿಬಿ ಹುಡುಕಾಟ ನಡೆಸುತ್ತಿದೆ. (ದಿಗ್ವಿಜಯ ನ್ಯೂಸ್)