ನೈಸರ್ಗಿಕ ಕೃಷಿಕನಾದ ಗುತ್ತಿಗೆದಾರ: ಯುವ ರೈತರಿಗೆ ನಾಯಸಿಂಗನಹಳ್ಳಿ ಮಂಜುನಾಥ್ ಮಾದರಿ

Nayasinganahalli Progressive farmer mandya
Published on

ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
ಜಮೀನನ್ನು ನಂಬಿ ಕೃಷಿ ಮಾಡಿದರೆ ಭೂಮಿತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ಮಾತಿಗೆ ತಾಲೂಕಿನ ನಾಯಸಿಂಗನಹಳ್ಳಿ ಗ್ರಾಮದ ಪ್ರಗತಿಪರ ರೈತ ಮಂಜುನಾಥ್ ನೈಸರ್ಗಿಕ ಕೃಷಿಯ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ.
ಮಂಜುನಾಥ್ 6 ಎಕರೆ ಜಮೀನು ಹೊಂದಿದ್ದು, ಆರಂಭದಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ನಂತರ ಬೇರೆ ಪ್ರಗತಿಪರ ರೈತರ ತೋಟಕ್ಕೆ ಭೇಟಿ ನೀಡಿ, ಸಾಮಾಜಿಕ ಜಾಲತಾಣದಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ಪಡೆದು ಪ್ರೇರೇಪಿತಗೊಂಡ ಅವರು, 2016ರಿಂದ ತಮ್ಮ ಜಮೀನಿನಲ್ಲಿ ವರ್ಷಕ್ಕೆ ಒಂದು ಎಕರೆಯಂತೆ ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಈಗ ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ.
ಕೃಷಿಯ ಜತೆಗೆ ಉಪಕಸುಬಾಗಿ ಕೋಳಿ ಸಾಕಣೆ, 20 ಕುರಿ, 2 ಎಮ್ಮೆ, 2 ಕರು, 2 ನಾಟಿ ಹಸುಗಳನ್ನು ಸಾಕಣೆ ಮಾಡಿದ್ದಾರೆ. ಜಾನುವಾರುಗಳ ಸಗಣಿ, ಗಂಜಲ ಹಾಗೂ ಸಾವಯವ ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣವನ್ನು 6ಮೀ. ಉದ್ದ, 1.5ಮೀ ಅಗಲ, 1.5 ಆಳದ ತೊಟ್ಟಿಯನ್ನು ನಿರ್ಮಾಣ ಮಾಡಿಕೊಂಡು ಅದರಲ್ಲಿ ಸ್ಲರಿ ತಯಾರಿಸಿ 15 ದಿನ ಕೊಳೆಸಿ ನಂತರ ಡೀಸೆಲ್ ಪಂಪ್‌ಸೆಟ್ ಸಹಾಯದಿಂದ ತೋಟದ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ಹೈನುಗಾರಿಕೆಯಿಂದ ಪ್ರತಿ ದಿನ 20 ಲೀಟರ್ ಹಾಲನ್ನು ಉತ್ಪಾದಿಸಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಕಳೆಗಳನ್ನು ಕತ್ತರಿಸಿ, ಕೃಷಿ ತ್ಯಾಜ್ಯಗಳನ್ನು ಪುಡಿ ಮಾಡಿ ಹೊದಿಕೆ ಮಾಡಿ ತೋಟದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ತೋಟ ನಿರ್ವಹಣೆಗೆ ಕೃಷಿ ಯಂತ್ರೋಪಕರಣಗಳಾದ ಟ್ರಾೃಕ್ಟರ್, ಕಲ್ಟಿವೇಟರ್, ಕಳೆ ಕತ್ತರಿಸುವ ಯಂತ್ರ, ಬ್ಯಾಟರಿ ಚಾಲಿತ ಔಷಧ ಸಿಂಪಡಣೆ ಯಂತ್ರವನ್ನು ಬಳಸುವ ಮೂಲಕ ಹೆಚ್ಚು ಕೂಲಿ ಆಳುಗಳನ್ನು ಅವಲಂಬಿಸದೆ ಸ್ವಾವಲಂಬಿಯಾಗಿ ತೋಟ ನಿರ್ವಹಣೆ ಮಾಡುತ್ತಿದ್ದಾರೆ.

ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಮಾವು, ಕಾಳುಮೆಣಸು, ಏಲಕ್ಕಿ, ಕಿತ್ತಳೆ, ಮೂಸಂಬಿ, ನಿಂಬೆ, ಹಿರಳಿಕಾಯಿ, ಸಪೋಟ, ಕೋಕೋ, ನುಗ್ಗೆ, ಶುಂಠಿ ಬೆಳೆದಿದ್ದಾರೆ. ಅರಣ್ಯ ಬೆಳೆಗಳಾದ ಹೆಬ್ಬೇವು, ಸಿಲ್ವರ್ ಓಕ್, ತೇಗ ಬೆಳೆಗಳನ್ನು ಬೆಳೆದಿದ್ದಾರೆ. ನುಗ್ಗೆಯಿಂದ ಹಸಿರೆಲೆ ಗೊಬ್ಬರದ ಬಳಕೆ ಮಾಡುತ್ತಿದ್ದಾರೆ. ಜತೆಗೆ ತಮ್ಮ ಜಮೀನಿನಲ್ಲಿ ನೀರಿನ ನಿರ್ವಹಣೆಗೆ 3 ಬೋರ್‌ವೆಲ್ ಹೊಂದಿದ್ದು ನೀರನ್ನು ಬೆಳೆಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರುಣಿಸುತ್ತಿದ್ದಾರೆ.
ರೋಗ ಹಾಗೂ ಕೀಟಬಾಧೆ ನಿಯಂತ್ರಣಕ್ಕೆ ಜೀವಾಮೃತ, ನೀಮಾಸ್ತ್ರವನ್ನು ಉಪಯೋಗಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಪ್ರತಿ ವರ್ಷ ತೆಂಗು, ಅಡಕೆ, ಬಾಳೆ, ಮಾವು ಸೇರಿ ಹೈನುಗಾರಿಕೆ, ತೋಟದ ಬೆಳೆಯಿಂದ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. ಇವರ ಸಾಧನೆಯನ್ನು ಕೃಷಿ ಇಲಾಖೆ ಗುರುತಿಸಿ ಆತ್ಮ ಯೋಜನೆಯಡಿ 2021-22 ನೇ ಸಾಲಿನಲ್ಲಿ ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net