ಲೋಕಾರ್ಪಣೆಗೆ ಸಜ್ಜುಗೊಂಡ ನಾಯಕನಕೆರೆ ದತ್ತ ಮಂದಿರ

YLP-DATTA MANDIR
Published on

ಯಲ್ಲಾಪುರ: ಪಟ್ಟಣದ ನಾಯಕನಕೆರೆ ದತ್ತ ಮಂದಿರದ ಲೋಕಾರ್ಪಣೆ ವಿವಿಧ ಧಾರ್ವಿುಕ ಕಾರ್ಯಕ್ರಮ ಡಿ. 13ರಿಂದ 15 ರವರೆಗೆ ವೈಭವದಿಂದ ನಡೆಯಲಿದ್ದು, ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆಯಲಿದ್ದು, 15ಕ್ಕೂ ಹೆಚ್ಚು ವೈದಿಕರಿಂದ ಧಾರ್ವಿುಕ ನೆರವೇರಲಿದೆ. ದತ್ತ ಜಯಂತಿ ಪೂರ್ವಾಂಗವಾಗಿ ಗುರುಚರಿತ್ರೆ ಪಾರಾಯಣ, ಕೃಷ್ಣಯಜುರ್ವೆದ ಪಾರಾಯಣಗಳು ಈಗಾಗಲೇ ಪ್ರಾರಂಭವಾಗಿವೆ. ನೂತನ ಶಿಲಾಮಯ ದೇವಾಲಯದಲ್ಲಿ ದತ್ತಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ನೂರಾರು ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆವರಣದಲ್ಲಿ ಬೃಹತ್ ಯಾಗಶಾಲೆ ನಿರ್ವಿುಸಲಾಗಿದೆ.

ಪ್ರತಿಷ್ಠಾಪನಾ ಕಾರ್ಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ನಾಲ್ಕೂ ದಿಕ್ಕಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವಾ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. ದೇವಸ್ಥಾನದ ಪಕ್ಕದಲ್ಲಿ ಬೃಹತ್ ಎರಡು ಪೆಂಡಾಲ್ ಹಾಕಲಾಗಿದ್ದು, ಪ್ರತಿದಿನ ನಾಲ್ಕರಿಂದ ಆರು ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಂದಂತಹ ಎಲ್ಲರಿಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದೇವಾಲಯದ ವಿಶೇಷತೆ:

ಕಳೆದ ವರ್ಷ ದತ್ತ ಜಯಂತಿ ಉತ್ಸವದಲ್ಲಿ ದೇವಾಲಯ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, 2024ರ ದತ್ತ ಜಯಂತಿಯಂದು ಪ್ರತಿಷ್ಠೆ ನೆರವೇರಿಸಲು ನಿರ್ದೇಶನ ನೀಡಿದ್ದರು. ಕೇವಲ 3 ತಿಂಗಳಲ್ಲಿ ದ್ರಾವಿಡ ಶೈಲಿಯಲ್ಲಿ ಸುಂದರ ದೇವಾಲಯ ನಿರ್ವಣಗೊಂಡಿದ್ದು, ಪ್ರತಿಷ್ಠೆಗೆ ಸಜ್ಜಾಗಿದೆ. ವೆಂಕಟರಮಣ ಸೂರಾಲು, ರತ್ನಾ, ಸತೀಶ ದಾನಗೇರಿ ಅವರ ನೇತೃತ್ವದಲ್ಲಿ ಶಿಲ್ಪಕಲೆಯ ಕೆತ್ತನೆಗಳು ಮೂಡಿ ಬಂದಿವೆ. ಪೂರ್ವಾಭಿಮುಖವಾದ ದೇವಸ್ಥಾನದಲ್ಲಿ ಒಟ್ಟು 12 ಕಂಬಗಳಿದ್ದು, ಪ್ರತಿ ಎರಡು ಕಂಬಗಳು ಒಂದು ರೀತಿಯ ಕೆತ್ತನೆ ಹೊಂದಿವೆ. ಮಹೇಶ ಮುನಿಯಂಗಳ ಅವರ ವಾಸ್ತು ಮಾರ್ಗದರ್ಶನದಲ್ಲಿ ನಾಯಕನಕೆರೆಯ ಪಕ್ಕ ಈ ಮಂದಿರ ನಿರ್ವಣಗೊಂಡಿದೆ.

ದೇವಸ್ಥಾನದ ಇತಿಹಾಸ:

ಸ್ವಾತಂತ್ರ್ಯ ಪೂರ್ವದಲ್ಲಿ ತಾಲೂಕಿನ ಹಿತ್ಲಳ್ಳಿಯ ಬ್ರಹ್ಮಾನಂದ ಗಣೇಶ ಯೋಗಿಗಳು ದತ್ತಗುರುವಿನ ಮೂರ್ತಿ ಪ್ರತಿಷ್ಠಾಪಿಸಿದರು. ಮಂದಿರ ನಿರ್ವಿುಸಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದವರು ಬಪ್ಪನಕೊಡ್ಲು ಶ್ರೀ ಶಿವಾನಂದ ಯೋಗಿಗಳು. ಅವರು ತಪಸ್ಸನ್ನು ಆಚರಿಸಿದ ಈ ಪುಣ್ಯಭೂಮಿಯಲ್ಲಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸಂಕಲ್ಪ, ಮಾರ್ಗದರ್ಶನದಂತೆ ಮಂದಿರ ನಿರ್ವಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net