

ನಾಯಕಹಟ್ಟಿ: ಸಮೀಪದ ಬೇಡರೆಡ್ಡಿಹಳ್ಳಿಯಲ್ಲಿ ಭಾನುವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಜರುಗಿತು.
ಚಿತ್ರದುರ್ಗ ಜಿಲ್ಲಾ ರೆಡ್ಡಿ ಸಮಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೇಡರೆಡ್ಡಿಹಳ್ಳಿ ಗ್ರಾಪಂ ಹಾಗೂ ರಾಜ್ಯದ ಪ್ರತಿಷ್ಠಿತ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ 13 ವಿಭಾಗಗಳನ್ನು ಮಾಡಿ ತಪಾಸಣೆ ಮಾಡಲಾಯಿತು. ಜತೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ಉಚಿತವಾಗಿ ಔಷಧಿ ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಇಲಾಖೆ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಂಚಾರಿ ಹೃದಯ ಘಟಕ, ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಚಿತ್ರದುರ್ಗದ ಎಸ್‌ಜೆಎಂ ದಂತ ಕಾಲೇಜು, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ 38 ತಜ್ಞವೈದ್ಯರ ತಂಡ ತಪಾಸಣೆ ಮಾಡಿ ಚಿಕಿತ್ಸೆ, ಸಲಹೆ ನೀಡಿತು. 60 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಶಿಬಿರದಲ್ಲಿ ಕಾರ್ಯನಿರ್ವಹಿಸಿದರು.
ಎರಡು ಸಾವಿರಕ್ಕೂ ಹೆಚ್ಚು ಮಂದಿ ತಪಾಸಣೆ ನಡೆಸಲಾಯಿತು. ಶಿಬಿರ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಸದಸ್ಯ ಓಬಳೇಶ್, ತಾಪಂ ಸದಸ್ಯ ರಾಮರೆಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ.ಪ್ರೇಮ ಸುಧಾ, ಹನುಮಂತರೆಡ್ಡಿ, ವೆಂಕಟೇಶ್ ರೆಡ್ಡಿ, ಕರ್ನಲ್ ಡಾ.ಬಿ.ಟಿ.ಕೃಷ್ಣಾರೆಡ್ಡಿ, ಡಾ.ಮಯೂರರೆಡ್ಡಿ, ಬಿ.ಆರ್.ತಿಮ್ಮಾರೆಡ್ಡಿ ಇತರರು ಉಪಸ್ಥಿತರಿದ್ದರು.