ಭಕ್ತರಿಂದ ಬಲವಂತದ ಶುಲ್ಕ ವಸೂಲಿ ಬೇಡ

NYK PP SABE 26
Published on

ನಾಯಕನಹಟ್ಟಿ; ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆಗೆ ಬರುವ ಅಂಗಡಿ ಮುಂಗಟ್ಟುಗಳ ಮತ್ತು ವಾಹನ ಸವಾರರಿಂದ ಬಲವಂತವಾಗಿ ಶುಲ್ಕ ವಸೂಲಿ ಮಾಡಬಾರದು ಎಂದು ಮುಖ್ಯಾಧಿಕಾರಿ ಡಿ.ಭೂತಪ್ಪ ಹೇಳಿದರು.

ಪಟ್ಟಣಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಸುಂಕಗಳ ಹರಾಜು ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾರ್ಚ್ 12ರಂದು ತಿಪ್ಪೇರುದ್ರಸ್ವಾಮಿ ಜಾತ್ರೆ ನಡೆಯಲಿದ್ದು, 5ರಿಂದ ಆರಂಭವಾಗಿ 16ರ ವರೆಗೂ ಜಾತ್ರೆಗೆ ನಿರಂತರವಾಗಿ ನಡೆಯುತ್ತದೆ. ಪಟ್ಟಣಕ್ಕೆ ಆಗಮಿಸುವ ಭಕ್ತರು, ಅಂಗಡಿ ಮುಂಗಟ್ಟುಗಳ ಮಾಲೀಕರು, ವಾಹನ ಸವಾರರಿಂದ ಬಲವಂತವಾಗಿ ಶುಲ್ಕ ವಸೂಲಿ ಮಾಡಬಾರದು. ಜಾತ್ರೆಗೆ ಬರುವ ಭಕ್ತರನ್ನು ಅತಿಥಿಗಳಾಗಿ ನೋಡಿಕೊಳ್ಳಬೇಕು. ಅವರಿಗೆ ನೀರು ನೆರಳು ದೀಪದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಟೆಂಡರ್‌ದಾರರಿಗೆ ಕಿವಿಮಾತು ಹೇಳಿದರು.

ಮುಖಂಡ ಆರ್.ಶ್ರೀಕಾಂತ್ ಮಾತನಾಡಿ, ಜಾತ್ರೆಗೆ ಬರುವ ಅಂಗಡಿ ಮುಂಗಟ್ಟುಗಳ ಮಾಲಿಕರಿಂದ ಯಾವುದೇ ತರಹದ ಕರ ವಸೂಲಿ ಮಾಡಬೇಡಿ. ಇದರಿಂದ ಜಾತ್ರೆಯಲ್ಲಿ ಅಂಗಡಿ ಮುಂಗಟ್ಟುಗಳು ಯತೇಚ್ಚವಾಗಿ ಬಂದು ಜಾತ್ರೆ ಕಳೆಗಟ್ಟುತ್ತದೆ ಎಂದು ಸಲಹೆ ನೀಡಿದರು. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಗಿ ಜಾತ್ರೆ ನೆಲವಳಿ ಸುಂಕ ಹರಾಜು ಪ್ರಕ್ರಿಯೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಯಿತು.

ಪಟ್ಟಣದಲ್ಲಿ ನಡೆಯುವ ಸಂತೆಯ ನೆಲವಳಿ ವಾರ್ಷಿಕ ಹರಾಜು ಶುಲ್ಕ ರೂ.3.2 ಲಕ್ಷ, ಖಾಸಗಿ ಬಸ್ ನಿಲ್ದಾಣ ವಾರ್ಷಿಕ ಹರಾಜು ರೂ.1.6 ಲಕ್ಷ, ಗೂಡಂಗಡಿಗಳ ವಾರ್ಷಿಕ ನೆಲವಳಿ ಹರಾಜು ಶುಲ್ಕ 2.9 ಲಕ್ಷ, ಜಾತ್ರೆ ವಾಹನ ಪ್ರವೇಶ ಶುಲ್ಕ ರೂ.27 ಸಾವಿರ, ತೆಂಗಿನ ಫಸಲು ರೂ.9 ಸಾವಿರ ಒಟ್ಟಾರೆ 6.52 ಲಕ್ಷಕ್ಕೆ ಹರಾಜು ಮಾಡಲಾಯಿತು.

ಹರಾಜು ಪ್ರಕ್ರಿಯೆಯಲ್ಲಿ ಪ.ಪಂ. ಸದಸ್ಯರಾದ ಎನ್.ಮಹಾಂತಣ್ಣ, ಟಿ.ಬಸಣ್ಣ, ಎಸ್.ಕೃಷ್ಣಮೂರ್ತಿ, ಎನ್.ಐ.ಮಹಮ್ಮದ್‌ಮನ್ಸೂರ್, ಜೆ.ಟಿ.ಎಸ್.ತಿಪ್ಪೇಸ್ವಾಮಿ, ಎಸ್.ಪಿ.ನಾಗರಾಜ, ಮುಖಂಡರಾದ ಸೈಯದ್‌ಕೌಸರ್, ನಾಗರಾಜ, ಡಿ.ಚೌಡಪ್ಪ, ಮುತ್ತಯ್ಯ, ಗುರುಪ್ರಸಾದ್, ಟಿ.ತಿಪ್ಪೇಸ್ವಾಮಿ, ಸುರೇಶ್, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net