ನನ್ನ ಸ್ಪರ್ಧೆ ಬಗ್ಗೆ ಅನುಮಾನ ಬೇಡ

NYK SS
Published on

ನಾಯಕನಹಟ್ಟಿ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಎಷ್ಟೂ ಸತ್ಯವೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 1994ರಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿಯೂ ಸ್ಪರ್ಧಿಸುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಟಿಕೆಟ್ ಘೋಷಣೆ ಬಳಿಕ ಪ್ರಚಾರ ಕಾರ್ಯ ಆರಂಭಿಸುತ್ತೇನೆ. ಇದು ನನಗೆ ಆರನೇ ಚುನಾವಣೆ. ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದೆ. ಹೈಕಮಾಂಡ್ ಟಿಕೆಟ್ ಅಂತಿಮಗೊಳಿಸುತ್ತದೆ. ಹೀಗಾಗಿ ಸಮಸ್ಯೆ ಉಂಟಾಗುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಲಂಚದ ವಿಷಯ ಜೋರಾಗಿ ಕೇಳಿ ಬರುತ್ತಿವೆ. ಇದು ಕಾಂಗ್ರೆಸ್ ಪಕ್ಷದ ಪರ ಅಲೆ ಸೃಷ್ಟಿಯಾಗಲು ವರದಾನವಾಗಿದೆ ಎಂದ ಅವರು, ಮಾಡಾಳು ವಿರೂಪಾಕ್ಷಪ್ಪ ಕುರಿತು ಕೇಳಿದ ಪ್ರಶ್ನೆಗೆ, ಉಪ್ಪು ತಿಂದವ ನೀರು ಕುಡಿಯಬೇಕು ಎಂದು ಪ್ರತಿಕ್ರಿಯಿಸಿದರು.

ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಹಲವರ ಪೈಪೋಟಿ ಇದೆ. ಗೆಲ್ಲುವ ಮತ್ತು ಪಕ್ಷ ನಿಷ್ಠರಿಗೆ ಟಿಕೆಟ್ ದೊರೆಯಲಿದೆ. ಜನಾರ್ದನರೆಡ್ಡಿ ಸ್ಥಾಪಿಸಿರುವ ಪಕ್ಷದಿಂದ ಕೆಲವು ಕ್ಷೇತ್ರದಲ್ಲಿ ಬಿಜೆಪಿಗೆ ನಷ್ಟವಾಗುವ ಸಾಧ್ಯತೆ ಇದೆ ಎಂದರು.

ಉದ್ಯಮಿಗಳಾದ ಡಾ.ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಮುಖಂಡರಾದ ಸ್ವಾಮಿ, ಹರಪನಹಳ್ಳಿ ಹಾಲೇಶ್ ಗೌಡ, ಕೆ.ತಿಪ್ಪೇರುದ್ರಪ್ಪ, ಎಂ.ವೈ.ಟಿ.ಸ್ವಾಮಿ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net