ಕರಡಿ ದಾಳಿ, ಒಬ್ಬ ಗಾಯ

NYK KARADI dALI 25
Published on

ನಾಯಕನಹಟ್ಟಿ: ತಳಕು ಹೋಬಳಿಯ ಅಜ್ಜನಹಳ್ಳಿ ಗ್ರಾಮದ ಹೊರವಲಯದಲ್ಲಿ ಕರಡಿಗಳು ವ್ಯಕ್ತಿ ಮೇಲೆ ದಾಳಿ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಅಜ್ಜನಹಳ್ಳಿಯ ಎ.ಕೆ.ತಿಪ್ಪೇಸ್ವಾಮಿ ಗಾಯಗೊಂಡ ವ್ಯಕ್ತಿ.

ಘಟನೆ ವಿವರ: ಶನಿವಾರ ಸಂಜೆ ತಳಕು ಹೋಬಳಿಯ ಅಜ್ಜನಹಳ್ಳಿಯ ಎ.ಕೆ.ತಿಪ್ಪೇಸ್ವಾಮಿ ಸೇರಿ ಮೂರ‌್ನಾಲ್ಕು ಜನರ ತಂಡ ಕಟ್ಟಿಗೆ ತರಲು ದೊಡ್ಡಹಳ್ಳಕ್ಕೆ ತೆರಳಿದ್ದಾರೆ. ಸಮೀಪದಲ್ಲೇ ಕುರಿ ಕಾಯುತ್ತಿದ್ದ ಯವಕರು ಮೂರು ಕರಡಿ ಬರುವುದನ್ನು ಕಂಡಿದ್ದಾರೆ.

ಬಳಿಕ ಗಾಬರಿಗೊಂಡು ಕಿರುಚಾಡಿ ತಮ್ಮ ಕುರಿಗಳನ್ನು ಓಡಿಸಿಕೊಂಡು ಗ್ರಾಮದ ಕಡೆಗೆ ಬಂದಿದ್ದಾರೆ. ಅಷ್ಟರಲ್ಲೇ ಕಟ್ಟಿಗೆ ಹೊರೆಹೊತ್ತು ಬರುತ್ತಿದ್ದ ತಿಪ್ಪೇಸ್ವಾಮಿಯ ಮೇಲೆ ಮೂರು ಕರಡಿಗಳ ಪೈಕಿ ಒಂದು ದೊಡ್ಡ ಕರಡಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ.

ಸಮೀಪದಲ್ಲೇ ಇದ್ದ ಜನರ ಗುಂಪು ಜೋರಾಗಿ ಕೂಗಾಟ ನಡೆಸಿ ಕರಡಿಗಳನ್ನು ಓಡಿಸಿದರು. ನಂತರ ಗಾಯಗೊಂಡ ವ್ಯಕ್ತಿಯನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ಅಜ್ಜನಹಳ್ಳಿ ರಂಗಸ್ವಾಮಿ ಹೇಳಿದರು.

ರಾತ್ರಿ ವೇಳೆ ಹೊರಬರದಂತೆ ಸೂಚನೆ: ಓಬಳಾಪುರದ ಗುಡ್ಡದಲ್ಲಿ ಕರಡಿಗಳಿದ್ದು, ನೀರು, ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಬಂದಿವೆ. ಜತೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಾಗಾವಾಗಿ ಓಡಾಡಿಕೊಂಡು ಬಂದಿವೆ. ಕರಡಿಗಳು ಜನರನ್ನು ನೋಡಿದಾಕ್ಷಣ ಗಾಬರಿಗೊಂಡು ದಾಳಿ ನಡೆಸುತ್ತವೆ. ಹಾಗಾಗಿ ಇಂದು ವಲಸೆ, ಅಜ್ಜನಹಳ್ಳಿ, ಚನ್ನಗಾನಹಳ್ಳಿ, ಬಂಜಿಗೆರೆ, ಘಟ್ಟಪರ್ತಿ ಗ್ರಾಮದ ಜನರಿಗೆ ರಾತ್ರಿವೇಳೆ ಹೊರಬರದಂತೆ ಸೂಚನೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್, ಅರಣ್ಯಾಧಿಕಾರಿ ವಸಂತ್‌ಕುಮಾರ್, ಅರಣ್ಯ ರಕ್ಷಕ ಇಮಾಮ್ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net