ಎಸ್ಸೆಸ್ಸೆಲ್ಸಿ ಪರೀಕ್ಷೆ ಗಂಭೀರವಾಗಿ ಪರಿಗಣಿಸಿ

NYK TURUVANURU 08
Published on

ನಾಯಕನಹಟ್ಟಿ: ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟ. ಈ ಸಮಯ ಹಾಳುಮಾಡಿಕೊಂಡರೆ ಭವಿಷ್ಯದಲ್ಲಿ ಬಹು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸಮೀಪದ ತುರುವನೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಯ ವ್ಯರ್ಥ ಮಾಡದೆ ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಬೇಕು ಎಂದರು.

ಗ್ರಾಮದ ಸರ್ಕಾರಿ ಕಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಇಲ್ಲಿನ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಆಚರಿಸಲು ಸೂಚಿಸಲಾಗಿದೆ. ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಅರ್ಥಪೂರ್ಣವಾದ ಸಮಾರಂಭ ನಡೆಸಲು ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಮಮೋಹನ್ ಮಾತನಾಡಿ, ಇಲ್ಲಿನ ಶಾಲೆ 50 ವರ್ಷ ಪೂರೈಸಿದೆ. ಇದಕ್ಕೆ ತುರ್ತಾಗಿ ಕಾಂಪೌಂಡ್, ತರಗತಿ ಕೊಠಡಿಗಳಿಗೆ ಹಸಿರು ಬೋರ್ಡ್, ಫ್ಯಾನ್ ಇತರ ಮೂಲ ಸೌಕರ್ಯ ಒದಗಿಸಬೇಕೆಂದು ಶಾಕಸಕರಲ್ಲಿ ಮನವಿ ಮಾಡಿಕೊಂಡರು.

ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಮುಖಂಡರಾದ ವಿವೇಕಾನಂದ, ನಾಗರಾಜಪ್ಪ, ಮಹಾದೇವ ರೆಡ್ಡಿ, ಚಂದ್ರಪ್ಪ, ಉಪಪ್ರಚಾರ್ಯೆ ನಾಗರತ್ನಮ್ಮ, ಪಿಎಸ್‌ಐ ಯಶೋದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net