ರೈತರ ಏಳ್ಗೆ ಕೆಎಂಎಫ್ ಗುರಿ

NYK KMF 08
Published on

ನಾಯಕನಹಟ್ಟಿ: ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ರೈತರಿಗೋಸ್ಕರ ಶ್ರಮಿಸುವ ಸಂಸ್ಥೆಯಾಗಿದೆ ಎಂದು ಕೆಎಂಎಫ್ ಮಾರಾಟ ಮಳಿಗೆ ವ್ಯವಸ್ಥಾಪಕ ಜಿ.ಬಿ.ಮಂಜುನಾಥ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ನಂದಿನಿ ಹಾಲಿನ ಉತ್ಪನ್ನಗಳನ್ನು ವಿತರಿಸಿ ಮಾತನಾಡಿದರು.

ಕೆಎಂಎಫ್, ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಹಾಲು ಖರೀದಿಸುವ ಮತ್ತು ಮಾರಾಟ ಮಾಡುವ ಏಕೈಕ ಸಂಸ್ಥೆಯಾಗಿದೆ. ರಾಜ್ಯದಲ್ಲಿ 14 ಒಕ್ಕೂಟಗಳನ್ನು ಒಳಗೊಂಡಿದ್ದು, ಇವುಗಳ ಮೂಲಕ 60 ಲಕ್ಷ ಲೀಟರ್ ಹಾಲನ್ನು ನಂದಿನಿ ಹೆಸರಿನಲ್ಲಿ ನಿತ್ಯ ರಾಜ್ಯ ಸೇರಿ ಹೊರ ರಾಜ್ಯಗಳಿಗೂ ಮಾರಾಟ ಮಾಡುತ್ತಿದೆ ಎಂದು ತಿಳಿಸಿದರು.

ನಿತ್ಯ ರೈತರಿಂದ ಖರೀದಿಸುವ ಹಾಲಿನಲ್ಲಿ 18 ಲಕ್ಷ ಲೀಟರ್ ಹಾಲು ಉಳಿಯುತ್ತಿದ್ದು, ಇದರಿಂದ 75 ರೀತಿಯ ಸಿಹಿ ತಿನಿಸುಗಳನ್ನು ಉತ್ಪಾದಿಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಮೂಲಕ ನಿಜವಾದ ಕ್ಷೀರಕ್ರಾಂತಿಗೆ ನಮ್ಮ ಸಂಸ್ಥೆ ಸಾಕ್ಷಿಯಾಗಿದೆ. ರಾಜ್ಯದ ಪ್ರತಿ ಜಿಲ್ಲೆಯ ರೈತರಿಗೆ ಹೈನೋದ್ಯಮ ಆರಂಭಿಸಲು ಧನ ಸಹಾಯ ನೀಡಿ ಅವರ ಜೀವನಮಟ್ಟ ಸುಧಾರಿಸುವಲ್ಲಿ ಸಫಲವಾಗಿದೆ ಎಂದರು.

ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನಿತ್ಯವೂ ನೀಡುವ ಹಾಲಿನಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆ ಸಾಧ್ಯವಾಗಿದೆ. ಇದು ಸರ್ಕಾರದ ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಪಪಂ ಸದಸ್ಯರಾದ ಎಸ್.ಕೃಷ್ಣಮೂರ್ತಿ, ಮಂಜುಳಾ ಶ್ರೀಕಾಂತ್, ಶಿವಮೊಗ್ಗ ಕೆಎಂಎಫ್ ಅಧೀಕ್ಷಕ ಮೃತ್ಯುಂಜಯ ಲೇಶ್ವೆ, ಶಿಕ್ಷಕರಾದ ನಾಗರಾಜಪ್ಪ, ಮುರಳಿ, ಹೇಮಣ್ಣ, ಶಾರದಮ್ಮ, ವಿಜಯಮ್ಮ, ಎಸ್.ನಾಗರಾಜ್, ಪೋಷಕ ಹರೀಶ್, ಆರೋಗ್ಯ ನಿರೀಕ್ಷಕ ಟಿ.ರುದ್ರಮುನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net