

ನಾಯಕನಹಟ್ಟಿ: ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಮೂಲ ವಿಜ್ಞಾನ ಕಲಿಕೆ ಬಗ್ಗೆ ಪ್ರೇರಣೆ ನೀಡಬೇಕು ಎಂದು ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆ ಟ್ಯಾಲೆಂಟ್ ಡೆವಲಪ್‌ಮೆಂಟ್ ಸೆಂಟರ್ ವಿಭಾಗದ ಡಾ.ರಾಘವೇಂದ್ರ ಹೇಳಿದರು.
ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ವಿಜ್ಞಾನ ವಿಷಯದ ವಿಶೇಷ ತರಗತಿಯಲ್ಲಿ ಮಾತನಾಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಟ್ಯಾಲೆಂಟ್ ಡೆವಲಪ್‌ಮೆಂಟ್ ಸೆಂಟರ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಹೆಗಡೆ, ವಿಜ್ಞಾನಿ ಮಾಲತಿ ಹೆಗಡೆ ಮತ್ತವರ ತಂಡ, ಗ್ರಾಮೀಣ ಮಕ್ಕಳಿಗೆ ಸೂಕ್ತ ತರಬೇತಿ ನೀಡಲು ಯೋಜನೆ ರೂಪಿಸಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ, ಅನುದಾನ ರಹಿತ ಪ್ರೌಢಶಾಲೆ ಮಕ್ಕಳಿಗೆ ವಿಜ್ಞಾನ ವಿಷಯಗಳ ಬಗ್ಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ವಿಜ್ಞಾನ, ಗಣಿತ ವಿಷಯಗಳು ಕಷ್ಟವೆಂಬ ಭಾವನೆ ಇದೆ. ಇದಕ್ಕೆ ಸೂಕ್ತ ತರಬೇತಿ ಕೊರತೆ ಕಾರಣ. ಇದನ್ನು ಮನಗಂಡೇ ವಿಶೇಷ ತರಗತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಡಾ.ಕೆ.ಟಿ.ಅರವಿಂದ, ಪಿ.ಟಿ.ಕಿಶೋರ್‌ಕುಮಾರ್, ಶ್ರೀಕಾಂತ್ ಭಟ್, ಕೆ.ಬಿ.ಮಂಜುನಾಥ್, ವಿಜಯ್‌ಕುಮಾರ್, ಎನ್.ರವಿಶಂಕರ್, ಉಪ ಪ್ರಾಚಾರ್ಯರಾದ ಬಿ.ಆರ್.ರಮೇಶ್, ಶಿಕ್ಷಕರಾದ ಫಣೀಂದ್ರಕುಮಾರ್, ಪಿ.ಅಶೋಕ್, ಎಸ್.ಆರ್.ವೀರೇಶ್, ಬಿ.ಉಮೇಶ್ ಇದ್ದರು.