

ನಾಯಕನಹಟ್ಟಿ: ಯುವಜನತೆ ಪಡೆದ ಜ್ಞಾನವನ್ನು ಒಳಿತಿಗಾಗಿ ಬಳಕೆ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.
ಪಟ್ಟಣದ ವಿದ್ಯಾವಿಕಾಸ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ದೇಶದ ಚಿತ್ತ ಯುವಜನರತ್ತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಮಗೆ ದೇಶಕ್ಕೆ ಹೋರಾಡಿದ ಸೈನಿಕರು, ಸ್ವಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರು ಆದರ್ಶವಾಗಬೇಕು. ಇದರಿಂದ ಆತ್ಮಸ್ಥೈರ್ಯ ಬೆಳೆದು ದೇಶಾಭಿಮಾನ ಮೂಡುತ್ತದೆ. ನಾಗರಿಕರು ಭ್ರಷ್ಟರಾದರೆ ಆಡಳಿತ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪುತ್ತದೆ. ಹೀಗಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಎಲ್ಲ ಸಮಸ್ಯೆಗೂ ಮುಕ್ತಿ ದೊರಕುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿದ ಚಳ್ಳಕೆರೆಯ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ದೇವೇಂದ್ರ ಪಂಡಿತ್ ಮಾತನಾಡಿ, ಪುಸ್ತಕ ಓದುವವರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸುತ್ತಿದೆ. ಈ ಅಭಿರುಚಿ ಬೆಳೆಸಿಕೊಂಡರೆ ಬದುಕಿನ ಬದಲಾವಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚಳ್ಳಕೆರೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ಪುಸ್ತಕಗಳು ಜ್ಞಾನ ಪ್ರಸಾರ ಮಾಧ್ಯಮಗಳಾಗಿ ಹೊರಹೊಮ್ಮಬೇಕು ಎಂದರು.
ನ್ಯಾಯಾಧೀಶಗಳಾದ ಕೋಟೆಪ್ಪ ಕಾಂಬ್ಳೆ, ಬಿ.ವೈ.ಮನು ಪಾಟೀಲ್, ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂವೈಟಿ ಸ್ವಾಮಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಉಪನ್ಯಾಸಕ ಧನಂಜಯ ಮತ್ತಿತರರಿದ್ದರು.