

ನಾಯಕನಹಟ್ಟಿ: ಟಿವಿ, ಮೊಬೈಲ್ ಆಕರ್ಷಣೆಯಿಂದ ಹೊರಬಂದು ಸತತ ಅಭ್ಯಾಸ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಿಮ್ಮಪ್ಪಯ್ಯನಹಳ್ಳಿ, ಅಬ್ಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ರಾತ್ರಿ ವಿಶೇಷ ತರಗತಿಗಳಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
ಬಾಲಕರಲ್ಲಿ ಉದಾಸೀನ ಹಾಗೂ ನಿರ್ಲಕ್ಷೃ ಮನೋಭಾವದ ಜತೆಗೆ ಮೊಬೈಲ್, ಟಿವಿ ಆಕರ್ಷಣೆಗಳಿಗೆ ಒಳಗಾಗುತ್ತಾರೆ. ಕ್ರಿಕೆಟ್ ಕ್ರೇಜ್ ಸಹ ಹೆಚ್ಚಾಗಿದೆ ಎಂದು ಬೇಸರಿಸಿದ ಅವರು, ಕಾಲಹರಣ ಮಾಡದೆ ತರಗತಿಯ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪರೀಕ್ಷೆ ಸಮೀಪಿಸುತ್ತಿರುವ ಕಾರಣ ರಾತ್ರಿ ಶಾಲೆ ಆರಂಭಿಸಲಾಗಿದೆ. ಚಳ್ಳಕೆರೆಯ ಶಾರದಾ ಪ್ರೌಢಶಾಲೆ, ಸ್ವಾಮಿವಿವೇಕಾನಂದ, ವಿಶ್ವಭಾರತಿ, ಅಬ್ಬೇನಹಳ್ಳಿ, ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಶಾಲೆ, ಪಟ್ಟಣದ ಎಸ್‌ಟಿಎಸ್‌ಆರ್ ಅನುದಾನಿತ ಪ್ರೌಢಶಾಲೆಗಳಲ್ಲಿ ರಾತ್ರಿ ಶಾಲೆ ಆರಂಭಿಸಲಾಗಿದೆ. ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ, ಹನುಮಂತನಹಳ್ಳಿ ಶಾಲೆಗಳಲ್ಲಿ ವಿಶೇಷ ತರಗತಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕರಾದ ಗಿರೀಶ್, ಈರಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸೋಮನಾಥ್, ಶಿಕ್ಷಕರಾದ ಕೆ.ಒ.ರಾಜಯ್ಯ, ಶಿವಕುಮಾರ್ ಮತ್ತಿತರರಿದ್ದರು.