

ನಾಯಕನಹಟ್ಟಿ: ಲಾಕ್‌ಡೌನ್‌ನಿಂದ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ತೋಟಗಾರಿಕಾ ಬೆಳೆಗಾರರ ಸಂಪೂರ್ಣ ಮಾಹಿತಿ ಹಾಗೂ ಆಗಿರುವ ನಷ್ಟದ ವಿವರವನ್ನು ಶೀಘ್ರವೇ ಸಂಗ್ರಹಿಸಿ ಎಂದು ಶಾಸಕ ಟಿ.ರಘುಮೂರ್ತಿ ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಸಮೀಪದ ತುರುವನೂರು ಹೋಬಳಿಯ ಬೆಳಗಟ್ಟ, ಕೂನಬೇವು, ಅವಳೇನಹಳ್ಳಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ಹೋಬಳಿಯ ಹುಣಸೇಕಟ್ಟೆ ಸೇರಿ ಅನೇಕ ಗ್ರಾಮಗಳಲ್ಲಿ ಹೂವು, ತರಕಾರಿ ಯತೇಚ್ಛವಾಗಿ ಬೆಳೆದಿದ್ದು, ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ನೇರ ಜಮೀನುಗಳಿಗೆ ತೆರಳಿ ಸರ್ವೇ ನಂಬರ್ ಸಹಿತ ಎಷ್ಟು ಎಕರೆ, ಯಾವ ಬೆಳೆ ನಷ್ಟವಾಗಿದೆ ಎಂಬ ಮಾಹಿತಿ ಸಂಗ್ರಹಿಸಿ ಏ.21ರಂದು ಚಿತ್ರದುರ್ಗದಲ್ಲಿ ನಡೆವ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಲ್ಲಿಕೆ ಮಾಡಬೇಕು. ನಾನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ತಾಪಂ ಅಧ್ಯಕ್ಷ ಲಿಂಗರಾಜು, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ಕೃಷಿ ಅಧಿಕಾರಿಗಳಾದ ಭಾರತಮ್ಮ, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಸುಧಾಕರ್, ನಾಗರಾಜ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.