

ನಾಯಕನಹಟ್ಟಿ: ಅಗತ್ಯ ವಸ್ತುಗಳ ಖರೀದಿಗೆ ಕೆಲ ನಿಯಮ ರೂಪಿಸಿದ್ದು, ಎಲ್ಲ ದಿನಸಿ ಅಂಗಡಿಗಳ ಮಾಲೀಕರು ಹಾಗೂ ಜನಸಾಮಾನ್ಯರು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಟ್ಟಣ ಪಂಚಾಯಿತಿ ಸೂಚನೆ ನೀಡಿದೆ.
ಔಷಧ ಅಥವಾ ದಿನಸಿ ಅಂಗಡಿಗೆ ಬರುವ ಗ್ರಾಹಕರು ಕನಿಷ್ಠ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳಬೇಕು. ಆದಷ್ಟು ಅಂಗಡಿಗಳ ಮಾಲೀಕರು ವೃತ್ತ ಬರೆದು ಅದರೊಳಗೆಯೇ ನಿಲ್ಲುವ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದೆ.
ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಪಪಂ ಸಿಬ್ಬಂದಿಗೆ ನೀಡಲಾಗಿರುವ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು. ದಿನ ಬಳಕೆ ವಸ್ತು ಮಾರುವ ವ್ಯಾಪಾರಿಗಳು ಗ್ರಾಹಕರಿಂದ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕು. ಔಷಧ ಅಂಗಡಿ ಹೊರತು ದಿನಸಿ, ತರಕಾರಿ, ಹಣ್ಣು ಮಾರುವವರು 12 ಗಂಟೆ ಒಳಗೆ ವ್ಯವಹರಿಸಲು ಸೂಚಿಸಲಾಗಿದೆ ಎಂದರು.
ಕಿರಾಣಿ ವರ್ತಕರ ಸಂಘದವರೊಂದಿಗೆ ಚರ್ಚಿಸಿದ್ದು, ಸಾಧ್ಯವಾದರೆ ಗ್ರಾಹಕರ ಮನೆ ಬಳಿಗೆ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತೇವೆ. ಆದರೆ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವುದು ಬೇಡ ಎಂದರು.