ಮನೆ ಬಾಗಿಲಿಗೆ ದಿನಸಿ ತಲುಪಿಸಿ

NYK PP 28
Published on

ನಾಯಕನಹಟ್ಟಿ: ದಿನಸಿ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಹೇಳಿದರು.

ಪಪಂ ಸಭಾಂಗಣದಲ್ಲಿ ಶನಿವಾರ ಪಟ್ಟಣದ ದಿನಸಿ ಅಂಗಡಿಗಳ ಮಾಲೀಕರು ಸೇರಿ ಅಗತ್ಯ ವಸ್ತುಗಳ ಅಂಗಡಿಯವರ ಸಭೆಯಲ್ಲಿ ಮಾತನಾಡಿದರು.

ಜನ ಸಾಮಾನ್ಯರು ಅನಗತ್ಯವಾಗಿ ಹೊರಗೆ ಓಡಾಡುವಂತಿಲ್ಲವಾದ್ದರಿಂದ ದಿನಸಿ, ಹಾಲು, ತರಕಾರಿ ಮಾರುವವರ ಫೋನ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಲಾಗುವುದು. ಅಗತ್ಯವಿರುವವರಿಗೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕೆಲವು ಅಂಗಡಿಗಳ ಮಾಲೀಕರು ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಹಣ ಪಡೆಯುತ್ತಾರೆಂದು ದೂರುಗಳು ಬಂದಿವೆ. ಇನ್ನೊಮ್ಮೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

ಔಷಧ ಅಂಗಡಿಗಳು ದಿನದ 24 ಗಂಟೆಯೂ ಬಾಗಿಲು ತೆರೆದು ಜನರ ಸೇವೆ ಮಾಡಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರಘುನಾಥ್ ಮಾತನಾಡಿ, ಹೊರಗೆ ಓಡಾಡುವಂತವರ ವಾಹನಗಳನ್ನು ಸೀಜ್ ಮಾಡಿ ದೂರು ದಾಖಲಿಸಲು ಸೂಚನೆ ಬಂದಿದೆ. ಈ ಸಮಯದಲ್ಲಿ ದೂರು ದಾಖಲಾದರೆ ಬೇಲ್ ಸಿಗುವುದಿಲ್ಲ ಎಂದರು.

ಅಗತ್ಯ ವಸ್ತುಗಳ ವ್ಯಾಪಾರಿಗಳು, ಮಾಧ್ಯಮದವರಿಗೆ ಪಾಸ್ ನೀಡಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಪಾಸ್ ಇರುವವರನ್ನು ಹೊರತು ಪಡಿಸಿ ಉಳಿದವರು ಹೊರಗೆ ತಿರುಗಾಡಿದರೆ ಯಾವುದೇ ಸೂಚನೆ ನೀಡದೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net