ಪರಿಶ್ರಮದಿಂದ ಸಾಧನೆ ಹಾದಿ ಸಲೀಸು

NYK LAW 29
Published on

ನಾಯಕನಹಟ್ಟಿ: ಕಠಿಣ ಪರಿಶ್ರಮದಿಂದ ಮಾತ್ರವೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಚಳ್ಳಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪಟ್ಟಣದ ಎಸ್‌ಟಿಎಸ್‌ಆರ್ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರಥಮ ಗುರಿ ಭವಿಷ್ಯ ರೂಪಿಸಿಕೊಳ್ಳುವುದಾಗಬೇಕು. ಕಲಿಕೆ ಹಂತದಲ್ಲಿ ಪ್ರೀತಿ, ಮದುವೆ ಸಲ್ಲದು. ಜೀವನ ರೂಪುಗೊಂಡ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಡುವುದು ಸಾಮಾನ್ಯ. ಹೀಗೆಯೇ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲೇ ಕಾನೂನಿನ ತಿಳಿವಳಿಕೆ ನೀಡಿದರೆ ಭವಿಷ್ಯ ಉಜ್ವಲವಾಗುತ್ತದೆ. ಈ ಹಂತದಲ್ಲೇ ಒಳ್ಳೆಯದು ಕೆಟ್ಟದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಶಿಕ್ಷಕರು ಮತ್ತು ಪಾಲಕರಿಂದಾಗಬೇಕು. ಇದು ಸಾಧ್ಯವಾದರೆ ಬಾಲಾಪರಾಧ ತಡೆಯಬಹುದು ಎಂದರು.

ಅಪರ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಮಾತನಾಡಿ, ವ್ಯಾಜ್ಯಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಮುಖ್ಯವಾಗಿ ವಿದ್ಯಾರ್ಥಿಗಳು ಕಾನೂನು ಜ್ಞಾನ ತಿಳಿದು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ಕಾನೂನಿನ ಪ್ರಾಥಮಿಕ ಜ್ಞಾನದ ಬಗ್ಗೆ, ವಕೀಲ ಜಯಶೀಲಾ ರೆಡ್ಡಿ ಪೋಸ್ಕೋ ಕಾಯ್ದೆ ಕುರಿತು ವಿವರಿಸಿದರು.

ವಕೀಲರಾದ ಡಿ.ಬಿ.ಬೋರಯ್ಯ, ಕೆ.ಕುಮಾರ್, ಎಸ್‌ಟಿಎಸ್‌ಆರ್ ಸಂಸ್ಥೆ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಅಧ್ಯಕ್ಷ ಕಲ್ಲಪ್ಪರ ತಿಪ್ಪೇಸ್ವಾಮಿ, ಕೋಶಾಧ್ಯಕ್ಷ ರಸೂಲ್, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net