

ನಾಯಕನಹಟ್ಟಿ: ತುರುವನೂರು ಹೋಬಳಿಯ ಕುಡಿಯುವ ನೀರಿಗಾಗಿ 230 ಕೋಟಿ ರೂ. ನೀಡಲಾಗಿದ್ದು, ಇದರಿಂದ ಹೋಬಳಿಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತುರುವನೂರು ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗ್ರಾಪಂ ಕಟ್ಟಡ ಹಾಗೂ ರೈತ ಸಂಪರ್ಕ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
2,380 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರ ಹಿನ್ನೀರು ಯೋಜನೆ ಜಾರಿಯಾಗಿದೆ. ಚಳ್ಳಕೆರೆ, ಕೂಡ್ಲಿಗೆ, ಜಗಳೂರು, ಮೊಳಕಾಲ್ಮೂರು ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲ. ಹೀಗಾಗಿ ಸರ್ಕಾರಿ ಕಟ್ಟಡ ನಿರ್ಮಿಸಲು ದಾನಿಗಳು ಆಸಕ್ತಿ ವಹಿಸಬೇಕಾಗಿದೆ. ವಾಲ್ಮೀಕಿ ಭವನಕ್ಕೆ 50 ಲಕ್ಷ ರೂ. ಒದಗಿಸಲಾಗಿದೆ. ಆದರೆ, ನಿವೇಶನದ ಸಮಸ್ಯೆ ಎದುರಾಗಿದೆ. ಇದೀಗ 50 ಲಕ್ಷ ರೂ. ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ 52 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಜಲಾಮೃತ ಯೋಜನೆಯಡಿ ಹೋಬಳಿಯಲ್ಲಿನ ದೊಡ್ಡಘಟ್ಟ ಕೆರೆ ಅಭಿವೃದ್ಧಿಗೆ 2.4 ಕೋಟಿ ರೂ. ಒದಗಿಸಲಾಗಿದೆ. ಈಗಾಗಲೇ 11 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ಕೆರೆ ಹೂಳು ಎತ್ತಲಾಗುತ್ತದೆ. ಈ ಮಣ್ಣನ್ನು ರೈತರಿಗೆ ನೀಡಲಾಗುವುದು. ಪ್ರತಿ ಲೋಡ್‌ಗೆ 20 ರೂ. ಪಾವತಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಜಿ.ಟಿ.ಬಾಬುರೆಡ್ಡಿ ಮಾತನಾಡಿ, ಗ್ರಾಪಂ ನಿರ್ಮಾಣಕ್ಕಾಗಿ ಕಲ್ಲಪ್ಪನವರ ಚಂದ್ರಶೇಖರಪ್ಪ ಜಮೀನು ದಾನ ನೀಡಿದ್ದಾರೆ. ಇದೇ ರೀತಿ ಜನತೆ ಜಮೀನು ದಾನ ಮಾಡಿದರೆ ಸರ್ಕಾರಿ ಕಚೇರಿ ನಿರ್ಮಾಣ ಸುಲಭವಾಗಲಿದೆ. ಗ್ರಾಮದಲ್ಲಿ ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಮಂಜೂರಾಗಿದೆ. ಇದರ ನಿರ್ಮಾಣ ಆರಂಭಗೊಂಡಿದೆ ಎಂದರು.
ತಾಪಂ ಇಒ ಕೃಷ್ಣನಾಯ್ಕ, ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಸದಸ್ಯೆ ತಿಪ್ಪಮ್ಮ, ಎಪಿಎಂಸಿ ಸದಸ್ಯೆ ಕಮಲಮ್ಮ, ಗ್ರಾಪಂ ಸದಸ್ಯರಾದ ಮಂಜುನಾಥ್, ವಿವೇಕಾನಂದಪ್ಪ, ತಾಪಂ ಸದಸ್ಯ ಬೋರಯ್ಯ, ತಿಪ್ಪಮ್ಮ, ಮುಖಂಡರಾದ ರಾಮಕೃಷ್ಣ ರೆಡ್ಡಿ, ಗ್ರಾಪಂ ಕಾರ್ಯದರ್ಶಿ ವಿರೂಪಾಕ್ಷಪ್ಪ, ಪಿಡಿಒ ಯೋಗೀಶಪ್ಪ ಇದ್ದರು.