

ನಾಯಕನಹಟ್ಟಿ: ಜಾತ್ರೆಗೆ ಬರುವ ಭಕ್ತರ ಆರೋಗ್ಯ ರಕ್ಷಣೆಗಾಗಿ 140 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಜಾತ್ರೆಗೆ 22 ವೈದ್ಯರು, 140 ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೊರ ಹಾಗೂ ಒಳಮಠ, ಈಶ್ವರ ದೇವಾಲಯ, ಅಂಬೇಡ್ಕರ್ ಭವನಗಳಲ್ಲಿ ನಾಲ್ಕು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರಗಳಲ್ಲಿ ಒಬ್ಬ ವೈದ್ಯ, ಫಾರ್ಮಸಿಸ್ಟ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸಲಾಗಿದೆ. ಐದು ಅಂಬ್ಯುಲೆನ್ಸ್‌ಗಳು ದಿನದ 24 ತಾಸು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಸಮುದಾಯ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸಿದ್ಧಪಡಿಸಿದ್ದು, ತುರ್ತು ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಂಜಕ್ಷನ್, ಪ್ಲ್ಲೂಯಿಡ್ಸ್‌ಗಳ ಸ್ಟಾಕ್ ಇರಿಸಲಾಗಿದೆ. ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಸುವವರು ಕಡ್ಡಾಯವಾಗಿ ಆರೋಗ್ಯ ಇಲಾಖೆ ಅನುಮತಿ ಪಡೆಯಬೇಕು. ತಯಾರಿಸಿದ ಅಥವಾ ಸಿದ್ಧಪಡಿಸಿದ ಆಹಾರದ ಪರೀಕ್ಷೆ ಕಡ್ಡಾಯವಾಗಿದೆ. ಆಹಾರ ಸುರಕ್ಷಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪಪಂ ಆರೋಗ್ಯ ನಿರೀಕ್ಷಕ ರುದ್ರಮುನಿ ಮಾತನಾಡಿ, 19 ಕಡೆ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದು, ಇವುಗಳಲ್ಲಿ 11 ಕಡೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. 8 ಮಾತ್ರ ಸುರಕ್ಷಿತವಾಗಿವೆ. ಈ ನೀರನ್ನು ಪಟ್ಟಣದಲ್ಲಿರುವ 20 ಶುದ್ಧ ಕುಡಿವ ನೀರಿನ ಘಟಕಗಳಲ್ಲಿ ಕ್ಲೋರೀನಿಕರಿಸಲಾಗುವುದು. ನಂತರ ಪರೀಕ್ಷೆ ನಡೆಸಿ 62 ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುವುದು. ಇದರಲ್ಲಿ ಐದು 25 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗಳಿದ್ದು, ಇವುಗಳನ್ನು ನಂದಿನಿ ಸಂಸ್ಥೆ ಒದಗಿಸಿದೆ. ಪ್ರತಿ ಟ್ಯಾಂಕರ್ ನೀರು ಸರಬರಾಜಿಗೆ ಮುಂಚೆ ಕ್ಲೋರೀಕರಣ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ. ವಿಕಾಸ್ ಮಾತನಾಡಿ, ಆಸ್ಪತ್ರೆಗೆ ನೀರಿನ ಸೌಲಭ್ಯವಿದೆ. ದಿನದ 24 ತಾಸು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಾಕಷ್ಟು ಔಷಧ ದಾಸ್ತಾನು, ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೇಳಿದರು.
ಟಿಎಚ್‌ಒ ಡಾ. ಪ್ರೇಮಸುಧಾ, ಡಾ. ಓಬಣ್ಣ, ಶೇಷಾದ್ರಿ, ಅಪ್ರೋಜ್ ಮತ್ತಿತರರಿದ್ದರು.