

ನಾಯಕನಹಟ್ಟಿ: ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದೇ ಹೆಸರಾಗಿದ್ದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶ್ಯಾಮರಾಯರು, ತ.ರಾ.ಸುಬ್ಬರಾಯ ಅವರು ಜನಿಸಿದ ತಳಕು ಗ್ರಾಮದಲ್ಲಿ ಈ ಮೂವರ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಗಮನ ಹರಿಸಬೇಕು ಎಂದು ರೈತ ಮುಖಂಡ ಟಿ.ಜಿ.ಓಬಣ್ಣ ಆಗ್ರಹಿಸಿದರು.
ತಳಕು ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ತರಾಸು ಜನ್ಮ ದಿನಾಚರಣೆ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ತಳಕು ಗ್ರಾಮಕ್ಕೆ ವಿಶೇಷ ಸ್ಥಾನವಿದೆ. ಟಿ.ಎಸ್.ವೆಂಕಣ್ಣಯ್ಯ ಅವರು ಕನ್ನಡದ ಪ್ರಥಮ ಪ್ರಾಧ್ಯಾಪಕರಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಗುರುಗಳಾಗಿದ್ದರು. ಹಾಗೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ತ.ಸು.ಶ್ಯಾಮರಾಯರ ಕೊಡುಗೆ ಅಪಾರ.
ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ತ.ರಾ.ಸು ನೂರಾರು ಕಾದಂಬರಿಗಳನ್ನು ರಚಿಸಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಸರ್ಕಾರ ಈ ಮಹನೀಯರ ಸಾಹಿತ್ಯ ಸೇವೆ ಗುರುತಿಸಿ ಗ್ರಾಮದಲ್ಲಿ ಪುತ್ಥಳಿ ಹಾಗೂ ಸಾಂಸ್ಕೃತಿಕ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಹೊಸಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿರುವ ತ.ರಾ.ಸು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ತ.ರಾ.ಸು ಸಂಬಂದಿಗಳಾದ ಟಿ.ಎಚ್.ಮಧುರನಾಥ, ಉಮಾ, ಗಾಯತ್ರಿ ವೆಂಕಣ್ಣಯ್ಯ, ಬಿಜೆಪಿ ಮಂಡಲಾಧ್ಯಕ್ಷ ಇ.ರಾಮರೆಡ್ಡಿ, ಮುಖಂಡರಾದ ನಾಗರಾಜ್, ಎಂ.ಎಸ್.ರವೀಂದ್ರ, ಟಿ.ಜೆ.ತಿಪ್ಪೇಸ್ವಾಮಿ, ಟಿ.ಕೃಷ್ಣಮೂರ್ತಿ, ಪಿ.ಮಹಾಂತೇಶ್, ವೀರೇಶ್, ಬಿ.ಟಿ.ಪಾಲನಾಯಕ, ಪಿಎಸ್‌ಐ ಸತೀಶನಾಯ್ಕ ಇದ್ದರು.
ಜಿಪಂ ಸದಸ್ಯ ಎನ್.ಓಬಳೇಶ್ ಹೇಳಿಕೆ: ಲಾಕ್‌ಡೌನ್ ಮುಕ್ತಾಯವಾದ ನಂತರ ತ.ರಾ.ಸು ಅವರ ಜನ್ಮ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು. ಪುತ್ಥಳಿ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲು ಸಚಿವ ಬಿ.ಶ್ರೀರಾಮುಲು ಅವರಿಗೆ ಮಾಹಿತಿ ನೀಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.