

ನಾಯಕನಹಟ್ಟಿ: ಐತಿಹಾಸಿಕ ಹಿರೇಕೆರೆ ಕಾವಲಿನ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು.
ಸೋಮವಾರದಿಂದಲೇ ಉತ್ಸವದ ವಿಧಿ ವಿಧಾನಗಳು ಆರಂಭವಾಗಿದ್ದವು. ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ದೇವಿಗೆ ಕಾಸು ಮೀಸಲು, ಉಡಿ ಅಕ್ಕಿ ಹರಕೆ ಸಲ್ಲಿಸಲಾಯಿತು.
ಬೃಹತ್ ಗಾತ್ರದ ಹೂವಿನ ಹಾರಗಳಿಂದ ಅಲಂಕರಿಸಿದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಪೂರ್ವಾಭಿಮುಖವಾಗಿ ರಥವನ್ನು ಎಳೆಯಲಾಯಿತು. ಪಾದಗಟ್ಟೆವರೆಗೂ ರಥ ಚಲಿಸಿದ ನಂತರ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ರಥವನ್ನು ಮೂಲ ಸ್ಥಳಕ್ಕೆ ಎಳೆದು ತರಲಾಯಿತು. ಭಕ್ತರು ಚೂರು ಬೆಲ್ಲ ಮೆಣಸು, ಬಾಳೆಹಣ್ಣನ್ನು ರಥಕ್ಕೆ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಕರಡಿ ಮಜಲು, ನಂದಿಧ್ವಜ ಕುಣಿತ, ಕಹಳೆ, ಇತರೆ ಕಲಾ ತಂಡಗಳು ಭಾಗವಹಿಸಿದ್ದವು.
ದಾವಣಗೆರೆ ಜಿಲ್ಲೆಯ ಜಗಳೂರು, ಮುಸ್ಟೂರು, ಚಿತ್ರದುರ್ಗ, ಕಡಬನಕಟ್ಟೆ, ತುರವನೂರು, ನಾಯಕನಹಟ್ಟಿ ಮತ್ತಿತರ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಎತ್ತಿನ ಬಂಡಿಗಳಲ್ಲಿ ಬಂದಂತಹ ಭಕ್ತರು ಜಾನುವಾರುಗಳಿಗೆ ಯಾವುದೇ ರೋಗಗಳು ಬಾರದಿರಲಿ ಎಂದು ಸಂಜೆ ಜಾನುವಾರುಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿದರು.
ಶಾಸಕ ಟಿ.ರಘುಮೂರ್ತಿ, ದೇವಸ್ಥಾನ ಸಮಿತಿ ಅಧ್ಯಕ್ಷ ಪಟೇಲ್ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಂವೈಟಿ ಸ್ವಾಮಿ, ಸ್ಥಳೀಯ ಜನಪ್ರತಿನಿಧಿಗಳು ಸಾವಿರಾರು ಭಕ್ತರು ಹಾಜರಿದ್ದರು.
ಮುಕ್ತಿ ಬಾವುಟ ಹರಾಜು: ರಥೋತ್ಸವಕ್ಕೂ ಮುನ್ನ ನಡೆದ ಮುಕ್ತಿ ಬಾವುಟ ಹರಾಜಿನಲ್ಲಿ ಎತ್ತಿನಹಟ್ಟಿ ಬೋರಯ್ಯ ರೂ. 56 ಸಾವಿರಕ್ಕೆ ಪಡೆದರು