

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವು ಮಾ.12ರಂದು ನಡೆಯುವುದರಿಂದ ಶ್ರೀಸ್ವಾಮಿಯ ಬೃಹತ್ ರಥಕ್ಕೆ ಭಾನುವಾರ ಚಿನ್ನಲೇಪಿತ ಕಳಶ ಸ್ಥಾಪನೆಯೊಂದಿಗೆ ಜಾತ್ರಾ ಕಾರ್ಯಗಳು ಆರಂಭಗೊಂಡವು.
ಕಳಶವನ್ನು ಮಧ್ಯಾಹ್ನ ಒಳಮಠದಿಂದ ಜನಪದ ವಾದ್ಯ ಮೇಳಗಳೊಂದಿಗೆ ತಂದು ರಥದ ಬಳಿಯ ಗದ್ದುಗೆ ಮೇಲಿಟ್ಟು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಸಾದ ವಿತರಣೆ ನಡೆಯಿತು.
ರಾಜ್ಯದ 2ನೇ ಬೃಹತ್ ರಥ: ತಿಪ್ಪೇರುದ್ರಸ್ವಾಮಿ ರಥವು ರಾಜ್ಯದ ಎರಡನೇ ಬೃಹತ್ ರಥವಾಗಿದೆ. ಒಂಭತ್ತು ಮಜಲುಗಳನ್ನು ಒಳಗೊಂಡಿರುವ ರಥಕ್ಕೆ ಐದು ಗಾಲಿಗಳಿರುವುದು ವಿಶೇಷ. ಎಪ್ಪತ್ತು ಅಡಿ ಎತ್ತರ, 75 ಟನ್ ಭಾರವಿದೆ. ರಥಕ್ಕೆ ಮೊದಲು ಈಚಲು ಹಗ್ಗಗಳಿಂದ ಬಿಗಿಗೊಳಿಸಿ ನಂತರ ಕಳಶ ಸ್ಥಾಪನೆ ಮಾಡಲಾಗುತ್ತದೆ. ತರುವಾಯ ಅಲಂಕಾರ ಆರಂಭವಾಗುತ್ತದೆ.
ಭಾನುವಾರ ರಥಕ್ಕೆ ಬಣ್ಣ ಬಣ್ಣದ ಪಟಗಳ ಅಲಂಕಾರಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರಾದ ಹಂಸವೇಣಿ, ಲಲಿತಮ್ಮ, ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ನಾಗಪ್ಪ, ರುದ್ರಮುನಿ, ಮುನಿಯಪ್ಪ, ಗೋವಿಂದರಾಜು ಪಾಲ್ಗೊಂಡಿದ್ದರು.