

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಜಾತ್ರೆ ರಾಜ್ಯದಲ್ಲಿಯೇ ದೊಡ್ಡ ಉತ್ಸವವಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉತ್ಸವದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಪಪಂ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಹೇಳಿದರು.
ಪಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ಜಾತ್ರೆಗೆ ಬರುವ ವರ್ತಕರ ಬಳಿ ತೆರಿಗೆ ವಸೂಲಿ ಸಂದರ್ಭದಲ್ಲಿ ಪಪಂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಇಲ್ಲದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.
ಜಾತ್ರೆಯಲ್ಲಿ ವರ್ತಕರಿಂದ ನೆಲದ ತೆರಿಗೆ ವಸೂಲಿ ಮಾಡುವ ವಿಷಯ ಕುರಿತು ವಿಷಯ ಪ್ರಸ್ತಾಪಿಸಿದರು.
ಸದಸ್ಯ ಎಸ್.ಉಮಾಪತಿ ಮಾತನಾಡಿ, ಕಳೆದ ಒಂದೆರಡು ವರ್ಷಗಳಿಂದ ಸುಂಕ ವಸೂಲಾತಿಯನ್ನು ಹರಾಜು ಮೂಲಕ ನೀಡಲಾಗುತ್ತಿದೆ. ಆದರೆ, ಟೆಂಡರ್ ಪಡೆದ ಗುತ್ತಿಗೆದಾರರು ಜಾತ್ರೆಗಾಗಿ ಆಗಮಿಸುವ ಬಡ ವರ್ತಕರ ಮೇಲೆ ದೌರ್ಜನ್ಯ ಎಸಗುತ್ತಾರೆ. ಜಾತ್ರೆಯ ವ್ಯಾಪಾರವೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಂಕ ವಸೂಲಾತಿಯನ್ನು ಟೆಂಡರ್ ಮೂಲಕ ಹರಾಜು ನೀಡಬಾರದು. ಪಪಂ ವತಿಯಿಂದ ಕಂದಾಯ ವಸೂಲಿ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಜಾತ್ರೆಯಲ್ಲಿ ಕಂದಾಯ ವಸೂಲಾತಿ ಕಷ್ಟವಾಗುತ್ತದೆ. ಸಾರ್ವಜನಿಕರು ನಮ್ಮ ಮೇಲೆ ಹಲ್ಲೆ ನಡೆಸುತ್ತಾರೆ, ನಮಗೆ ರಕ್ಷಣೆಯಿಲ್ಲ. ಎರಡು ವರ್ಷಗಳಿಂದ ಗಮನಿಸಿದ್ದೇನೆ. ಟೆಂಡರ್ ನೀಡುವುದೇ ಒಳಿತು ಎಂದು ಆಕ್ರೋಶಭರಿತವಾಗಿ ಹೇಳಿದರು.
ಇದರಿಂದ ಸಿಟ್ಟೆಗೆದ್ದ ಎಸ್.ಉಮಾಪತಿ, ಜೆ.ಆರ್.ರವಿಕುಮಾರ್, ಮಂಜುಲಾ ಕಂದಾಯ ವಸೂಲಾತಿ ಮಾಡುವುದು ಸಿಬ್ಬಂದಿ ಕರ್ತವ್ಯ. ಹರಾಜಿನ ಮೂಲಕ ಕಂದಾಯ ವಸೂಲಾತಿ ಸರಿಯಲ್ಲ ಎಂದು ಪಟ್ಟು ಹಿಡಿದರು.
ಕಂದಾಯ ನಿರೀಕ್ಷಕ ಶಿವಕುಮಾರ್ ಮಾತಿನಿಂದ ಗರಂ ಆದ ತಹಸೀಲ್ದಾರ್, ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಜಾರಿಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಿನಯದಿಂದ ವರ್ತಿಸಬೇಕು. ಇಲ್ಲವಾದರೆ ನೊಟೀಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಂತಿಮವಾಗಿ ಪ್ರಮುಖ ರಸ್ತೆಗಳಲ್ಲಿ ಪ್ರತಿ ಚದರ ಅಡಿಗೆ 20 ರೂ. ಹಾಗೂ ಹಿಂದಿನ ಬದಿಯ ರಸ್ತೆಗಳಲ್ಲಿ 10 ರೂ. ಗಳಂತೆ ಪಪಂ ಸಿಬ್ಬಂದಿ ಸುಂಕ ವಸೂಲಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ವಸತಿ ತೆರಿಗೆ ಶೇ.16, ವಾಣಿಜ್ಯ ತೆರಿಗೆ ಶೇ.30, ನೀರಿನ ತೆರಿಗೆಯನ್ನು ಶೇ.16ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಲಾಯಿತು.
ಸದಸ್ಯ ಜೆ.ಆರ್.ರವಿಕುಮಾರ್ ಆಶ್ರಯ ಯೋಜನೆ ಕುರಿತು ಮಾತನಾಡಿದರು. ಟೆಂಡರ್ ಅಂತಿಮಗೊಂಡಿರುವ 1.14 ಕೋಟಿ ರೂ. ವೆಚ್ಚದ ನಾನಾ ಕಾಮಗಾರಿಗಳ ಅನುಷ್ಠಾನಕ್ಕೆ ಸಭೆ ಒಪ್ಪಿಗೆ ನೀಡಿತು.