

ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳು ಸಂದಿಗ್ಧ ಪರಿಸ್ಥಿತಿಗೆ ಸಿಲುಕದಂತೆ ಕ್ರಮಕೈಗೊಳ್ಳಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ ಹೇಳಿದರು.
ಪಟ್ಟಣದ 5, 14ನೇ ವಾರ್ಡ್‌ಗೆ ಗುರುವಾರ ಭೇಟಿ ನೀಡಿ ಅಲೆಮಾರಿ ಮತ್ತು ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿ ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಅಲೆಮಾರಿಗಳು ಮತ್ತು ನಿರ್ಗತಿಕರು, ಪಡಿತರ ಚೀಟಿ ವಂಚಿತ ಕುಟುಂಬಗಳಿವೆ. ಈ ಕುಟುಂಬಗಳು ದಿನಗೂಲಿ, ವ್ಯಾಪಾರ ಮತ್ತಿತರ ಕಸುಬುಗಳಲ್ಲಿ ತೊಡಗಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇವರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಇದನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಗಮನಿಸಿ ವೈಯಕ್ತಿಕ ಖರ್ಚಿನಲ್ಲಿ 50 ಕುಟುಂಬಗಳನ್ನು ಗುರುತಿಸಿ ಲಾಕ್‌ಡೌನ್ ಮುಗಿಯುವವರೆಗೂ ಆಹಾರ ಸಾಮಗ್ರಿಗಳನ್ನು ನೀಡಲು ಸೂಚಿಸಿದ್ದಾರೆ ಎಂದರು.
ಪಪಂ ಸದಸ್ಯ ಎನ್.ಮಹಾಂತಣ್ಣ, ಮಂಡಲ ಮಾಜಿ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಕಾರ್ಯದರ್ಶಿ ಪಿ.ಶಿವಣ್ಣ, ಸಚಿವರ ಆಪ್ತ ಸಹಾಯಕರಾದ ಹನುಮಂತರಾಯಪ್ಪ, ಪಾಪೇಶ್ ನಾಯಕ, ಮುಖ್ಯಾಧಿಕಾರಿ ಡಿ.ಭೂತಪ್ಪ, ಮುಖಂಡರಾದ ಸಿ.ಬಿ.ಮೋಹನ್ ಕುಮಾರ್, ಓಬಣ್ಣ, ಸೈಯದ್‌ಕೌಸರ್, ವೇಣುಗೋಪಾಲ್, ಡಿ.ಕೆ.ಬಸವರಾಜ್, ಕುಮಾರ್, ವಿಶ್ವನಾಥ್ ಇತರರಿದ್ದರು.