ಕರೊನಾ ತಡೆಗಾಗಿ ಅನುದಾನ ಮೀಸಲು

NYK PP 03
Published on

ನಾಯಕನಹಟ್ಟಿ: ಪಟ್ಟಣಕ್ಕೆ ಕರೊನಾ ವೈರಸ್ ಬರದಂತೆ ಎಚ್ಚರವಹಿಸಲು 9.87 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆಗೆ ಶುಕ್ರವಾರ ಆಯೋಜಿಸಿದ್ದ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ತುರ್ತುಸಭೆಯಲ್ಲಿ ಅನುಮೋದನೆ ದೊರೆಯಿತು.

ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ 2015-16ನೇ ಸಾಲಿನಲ್ಲಿ 3.40 ಲಕ್ಷ ರೂ., 2016-17ನೇ ಸಾಲಿನ 1.98 ಲಕ್ಷ, 2017-18ನೇ ಸಾಲಿನ 2.63 ಲಕ್ಷ, 2018-19ನೇ ಸಾಲಿನಲ್ಲಿ 4.91 ಲಕ್ಷ ರೂ. ಉಳಿತಾಯದ ಮೊತ್ತವಿದೆ. ಇದನ್ನು ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಹೈಪೋ ಕ್ಲೋರೊನೇಷನ್ ಮತ್ತು ಹೈಪೋದ್ರಾವಣ ಖರೀದಿಸಲು ಮತ್ತು ಬಾಡಿಗೆ ವಾಹನದಲ್ಲಿ ಸಿಂಪಡಿಸಲು ತಲಾ 1 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದರು.

ಎನ್.ಮಹಾಂತಣ್ಣ ಮಾತನಾಡಿ, ಬಾಡಿಗೆ ವಾಹನದಲ್ಲಿ ದ್ರಾವಣ ಸಿಂಪಡಣೆ ಕಷ್ಟವಾಗುತ್ತದೆ ಮತ್ತು ಹೆಚ್ಚಿನ ಹಣ ವ್ಯಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಎಂ.ಮಲ್ಲಿಕಾರ್ಜುನ, ಚಳ್ಳಕೆರೆಯ ಅಗ್ನಿಶಾಮಕ ವಾಹನದಿಂದ ಉಚಿತವಾಗಿ ಕ್ಲೋರೊನೇಷನ್ ಸಿಂಪಡಣೆ ಮಾಡಿಸಲಾಗುವುದು ಎಂದರು.

ಬಿಪಿಎಲ್ ಕುಟುಂಬಗಳಿಗೆ ವಿತರಿಸಲು ಮಾಸ್ಕ್, ಸ್ಯಾನಿಟೈಸರ್ ಖರೀದಿಗೆ 3.29 ಲಕ್ಷ ರೂ, ಪೌರಕಾರ್ಮಿಕರ ಸುರಕ್ಷಾ ಧಿರಿಸಿಗೆ 1 ಲಕ್ಷ, 3 ಫಾಗಿಂಗ್ ಮಿಷನ್ ಖರೀದಿಗೆ 79 ಸಾವಿರ, 3 ವೀಡ್ ಕಟ್ಟರ್ ಖರೀದಿಗೆ 79 ಸಾವಿರ ರೂ. ಕ್ರಿಯಾಯೋಜನೆಗೆ ಅನುಮೋದನೆ ದೊರೆಯಿತು.

ಪಪಂ ವ್ಯಾಪ್ತಿಯ ನಿರ್ಗತಿಕರಿಗೆ ವಸತಿ ಕೇಂದ್ರ ತೆರೆದು ಊಟ ಸೌಲಭ್ಯಕ್ಕೆ 2 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಮುಖ್ಯಾಧಿಕಾರಿ ಡಿ.ಭೂತಪ್ಪ ಸಭೆಗೆ ತಿಳಿಸಿದರು.

ಪ್ರತಿಕ್ರಿಯಿಸಿದ ಎಸ್.ಉಮಾಪತಿ, ಎಸ್.ಕೃಷ್ಣಮೂರ್ತಿ, ಮಂಜುಳಾ ಶ್ರೀಕಾಂತ್, ಆಹಾರ ತಯಾರಿಸಿ ವಿತರಿಸುವುದು ಕಷ್ಟವಾಗುತ್ತದೆ. ಈಗಾಗಲೇ ದೇವಾಲಯದಿಂದ ಊಟೋಪಚಾರಕ್ಕೆ ವ್ಯವಸ್ಥೆ ಸಿದ್ಧವಿದೆ. ದೇಗುಲಕ್ಕೆ 2 ಲಕ್ಷ ರೂ. ನೀಡಿ ನಿರಾಶ್ರಿತರಿಗೆ ಊಟ ನೀಡುವ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಜೆ.ಆರ್.ರವಿಕುಮಾರ್ ಮಾತನಾಡಿ, ಪಟ್ಟಣದ ಆಸ್ಪತ್ರೆಗೆ ಜ್ವರ, ಶೀತ, ನೆಗಡಿ, ಕೆಮ್ಮು ಕಾರಣ ಹೊತ್ತು ಬರುವ ರೋಗಿಗಳಿಗೆ ಬರೀ ಮಾತ್ರೆ ಕೊಟ್ಟು ಕಳಿಸಲಾಗುತ್ತಿದೆ. ಕೂಡಲೇ ಸರ್ಕಾರ ಫ್ಲೂ ಚಿಕಿತ್ಸಾ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.

ಆಡಳಿತಾಧಿಕಾರಿ ಎಂ.ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ ಫ್ಲೂ ಚಿಕಿತ್ಸಾ ಕೇಂದ್ರ ತೆರೆಯಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಸದಸ್ಯರಾದ ಸಿದ್ದಲಿಂಗಮ್ಮ, ಬೋರಮ್ಮ, ನೀಲಮ್ಮ, ಗಿರಿಜಮ್ಮ, ಜೆ.ಟಿ.ಎಸ್. ತಿಪ್ಪೇಸ್ವಾಮಿ, ಷಗುಫ್ತಾಯಾಸ್ಮೀನ್, ಎನ್.ಐ. ಮಹಮ್ಮದ್ ಮನ್ಸೂರ್, ಬೋರಮ್ಮ ದಿವಾಕರ್, ಎಸ್.ಪಿ.ನಾಗರಾಜ್, ಅನಸೂಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net