ನಕ್ಸಲರಿಗೆ ಶರಣಾಗುತ್ತಿರುವ ಸರ್ಕಾರ,  ಎಬಿವಿಪಿ ಆಕ್ಷೇಪ

Published on

ಹುಬ್ಬಳ್ಳಿ: ನಕ್ಸಲಿಸಂ ಮಾನವತೆಯ ವಿರೋಧಿ, ದೇಶದ ಅಭಿವೃದ್ಧಿಗೆ ಕಂಟಕವಾಗಿದೆ. ಇದಕ್ಕೆ ದೇಶದ ಶೇ. 70ರಷ್ಟು ಭಾಗ ಸಾವು ನೋವು, ಬರ್ಬರತೆಗೆ ಬಲಿಯಾಗಿದ್ದು ಇಂದು ಇತಿಹಾಸ, ಕೇಂದ್ರ ಸರ್ಕಾರದ ಇಚ್ಛಾಶಕ್ತಿಯಿಂದ ಇಂದು ನಕ್ಸಲಿಸಂ ಮರೆಯಾಗುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.

ನಕ್ಸಲಿಸಂನ ಸಿದ್ಧಾಂತ ಮತ್ತು ಚಳುವಳಿಗಳು ಕಾಲಬಾಹಿರವಾಗುತ್ತಿರುವ ಸಂದರ್ಭದಲ್ಲಿ ಇದರ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ಜ್ಞಾನೋದಯ ಉಂಟಾಗಿ ಶರಣಾಗುತ್ತಿರುವುದು ಸ್ವಾಗತಾರ್ಹ.

ಕರ್ನಾಟಕದಲ್ಲಿ ಇಂದು ಸರ್ಕಾರಕ್ಕೆ ಶರಣಾಗಿರುವ 6 ನಕ್ಸಲರ ಮೇಲೆ 30- 40ಕ್ಕಿಂತ ಹೆಚ್ಚು ಕೇಸ್ ಗಳು ಇವೆ. ಅಲ್ಲದೇ ತಮ್ಮ ಜೀವನದುದ್ದಕ್ಕೂ ಕಾನೂನು ಬಾಹಿರ ಚಟುವಟಿಕೆ, ಹಲವಾರು ದುಷ್ಟ ಕೃತ್ಯಗಳಲ್ಲಿ ಮತ್ತು ಬರ್ಬರತೆಯಲ್ಲಿ ಭಾಗವಹಿಸಿ ಜೀವನದ ಸಂಧ್ಯಾಕಾಲದಲ್ಲಿ ಶರಣಾಗುತ್ತಿರುವುದನ್ನು ನೋಡಿದರೆ ಖೇದಕರವೆನಿಸುತ್ತದೆ.

ವಿಪರ್ಯಾಸ ಎಂದರೆ ಕಾನೂನಿನ ಮೂಲಕ ಶರಣಾಗತಿಯನ್ನು ಮಾಡಿಸಬೇಕಾಗಿದ್ದ ಸರ್ಕಾರ ತಾನೇ ನಕ್ಸಲರಿಗೆ ಶರಣಾಗುತ್ತಿರುವುದು ದುರದೃಷ್ಟಕರ ಎನಿಸುತ್ತಿದೆ. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತು ಮುಖ್ಯವಾಹಿನಿಗೆ ಬಂದು ಇತರರಂತೆ ಬಾಳಲು ಅವಕಾಶವನ್ನು ಕೊಟ್ಟಿರುವ ಸರ್ಕಾರದ ಯೋಜನೆಯನ್ನು ದುರುಪಯೋಗ ಪಡೆದುಕೊಳ್ಳುತ್ತಿರುವುದಲ್ಲದೇ, ಇತರರಿಗೆ ತಮ್ಮ ಮಾನವ ವಿರೋಧಿ ಮಾರ್ಗದಲ್ಲಿ ನಡೆಯುತ್ತಿರುವವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ.

ಸಾವಿರಾರು ಅಮಾಯಕ ಜನರ, ಪೊಲೀಸರ ಪ್ರಾಣವನ್ನು ತೆಗೆದಿರುವರಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ, ತಮ್ಮ ಗಹ ಕಚೇರಿ ಕೃಷ್ಣದಲ್ಲಿ ಶರಣಾಗತಿಯನ್ನು ಮಾಡಿಸುತ್ತಿರುವುದು ಮತ್ತು ವೈಭವಕರಿಸುತ್ತಿರುವುದು ರಾಜ್ಯದ ಜನತೆಗೆ ಮತ್ತು ಮಾನವೀಯ ಸಮಾಜಕ್ಕೆ ಮಾಡುತ್ತಿರುವ ಅವಮಾನ ಮತ್ತು ಮೋಸದ ಸಂಗತಿಯಾಗಿದೆ.

ಪ್ಯಾಕೇಜ್ ಪೋಷಣೆ ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ. ಆರ್ಥಿಕವಾಗಿ ಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯದ ಜನರ ತೆರಿಗೆ ಹಣದಲ್ಲಿ ಮನಬಂದಂತೆ ಪ್ಯಾಕೇಜ್ ಘೋಷಣೆ ಮಾಡುತ್ತಿರುವುದು ಸಮಾಜದ ವ್ಯವಸ್ಥೆಗೆ ಮಾಡುವ ಅನ್ಯಾಯವಾಗಿದೆ.

ಆದ್ದರಿಂದ ಸರಿಯಾದ ಕಾನೂನು ಚೌಕಟ್ಟಿನಲ್ಲಿ ಶರಣಾಗತಿಯಲ್ಲಿ ಮಾಡಿಸಬೇಕು. ಎಲ್ಲ ಕೇಸ್ ಗಳು ನ್ಯಾಯಾಲಯದಲ್ಲಿ ಇತ್ಯಾರ್ಥವಾದ ಮೇಲೆ ಪ್ಯಾಕೇಜ್ ನೀಡಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ ಎಂದು ಕರ್ನಾಟಕ ಉತ್ತರ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net