ಸರ್ಕಾರಕ್ಕೆ ನಕ್ಸಲ್​ ಲಕ್ಷ್ಮೀ ತೊಂಬಟ್ಟು ಶರಣಾಗತಿ...

Naxal-Lead
Published on

ಉಡುಪಿ ಡಿಸಿ ಮುಂದೆ ತಲೆಬಾಗಿದ ಮಹಿಳೆ

ಎಸ್ಪಿ ಕಚೇರಿಯಲ್ಲಿ ನಡೆದ ಕಾನೂನು ಪ್ರಕ್ರಿಯೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಕ್ಸಲ್​ ಚಟುವಟಿಕೆಯಲ್ಲಿ ತೊಡಗಿಕೊಂಡು ಸುಮಾರು 20 ವರ್ಷದಿಂದ ತಲೆಮರೆಸಿಕೊಂಡಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೊಂಬಟ್ಟು ಗ್ರಾಮದ ಲಕ್ಷ್ಮೀ, ಉಡುಪಿಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ಭಾನುವಾರ ಬೆಳಗ್ಗೆ ಆಗಮಿಸಿ ಸರ್ಕಾರಕ್ಕೆ ಶರಣಾಗಿದ್ದಾಳೆ.

ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ್ದ ಲಕ್ಷ್ಮೀ ಜತೆಗೆ ಆಕೆಯ ಸಹೋದರರಾದ ಬಸವ ಪೂಜಾರಿ, ವಿಠ್ಠಲ ಪೂಜಾರಿ, ಸಂಬಂಧಿಕರು ಮತ್ತು ನಕ್ಸಲ್​ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಕೆ.ಪಿ. ಶ್ರೀಪಾಲ್​ ಇದ್ದರು. ಜಿಲ್ಲಾ ಪೊಲೀಸ್​ ವರಿಷ್ಠ ಡಾ.ಕೆ.ಅರುಣಕುಮಾರ್​, ಹೆಚ್ಚುವರಿ ಎಸ್ಪಿ ಎಸ್​.ಟಿ. ಸಿದ್ಧಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು.

ನಕ್ಸಲ್​ ಚಳವಳಿಯಲ್ಲಿ ಉಡುಪಿ ಜಿಲ್ಲೆಯ ವಿಕ್ರಂ ಗೌಡ (ಇತ್ತೀಚೆಗೆ ಎನ್​ಕೌಂಟರ್​ ಆದ) ಹಾಗೂ ಲಕ್ಷ್ಮೀ ತೊಂಬಟ್ಟು ತೊಡಗಿಸಿಕೊಂಡಿದ್ದರು. ಕರ್ನಾಟಕ ಮೂಲದ ಲಕ್ಷ್ಮೀ ಮಾತ್ರ ನಕ್ಸಲ್​ ಆಗಿದ್ದು ಇದೀಗ ಪೊಲೀಸರ ಮೂಲಕ ಉಡುಪಿಯಲ್ಲಿ ಶರಣಾಗಿದ್ದಾಳೆ. ಕಳೆದ ಹಲವು ವರ್ಷದಿಂದ ಆಂಧ್ರ ಪ್ರದೇಶದಲ್ಲಿ ತನ್ನ ಪತಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು.

2006ರಿಂದಲೇ ಕಣ್ಮರೆ

ಇತ್ತೀಚೆಗೆ ಹೆಬ್ರಿ ಸಮೀಪ ಎನ್​ಕೌಂಟರ್​ನಲ್ಲಿ ಹತನಾದ ನಕ್ಸಲ್​ ನಾಯಕ ವಿಕ್ರಂ ಗೌಡ ಸೇರಿದಂತೆ ಅನೇಕರಿಂದ ಪ್ರಭಾವಿತಳಾಗಿ 2006ರ ಮಾರ್ಚ್​ 6ರಿಂದ ಲಕ್ಷ್ಮೀ ಕಣ್ಮರೆಯಾಗಿದ್ದಳು. ನಂತರ ನಕ್ಸಲ್​ ಚಳವಳಿಯಲ್ಲಿ ಭಾಗಿಯಾಗಿ ವಾರಾಹಿ-ಕರಾವಳಿ ದಳದಲ್ಲಿ ಗುರುತಿಸಿಕೊಂಡಿದ್ದಳು ಎಂದು ಪೊಲೀಸ್​ ದಾಖಲೆಗಳಿಂದ ತಿಳಿದುಬಂದಿದೆ.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ

ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಯ ಆರು ಮಕ್ಕಳ ಪೈಕಿ ಐದನೆಯವಳಾದ ಲಕ್ಷ್ಮೀ, 7ನೇ ತರಗತಿವರೆಗೆ ಕಲಿತಿದ್ದಾಳೆ. ತನ್ನ ಗ್ರಾಮದಲ್ಲಿ ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಳು. ಬಳಿಕ ನಕ್ಸಲ್​ ಚಳವಳಿಯಿಂದ ಆಕರ್ಷಿತಳಾಗಿದ್ದಳು. ನಕ್ಸಲ್​ ಸೇರಿದ ಬಳಿಕ ಅವಳು ಗುಂಪಿನ ಪ್ರಮುಖ ಹಾಡುಗಾರ್ತಿಯಾಗಿದ್ದಳು.

ಲಕ್ಷ್ಮೀ ಮೇಲಿತ್ತು ಮೂರು ಪ್ರಕರಣ

Laxmi Photo
ಉಡುಪಿ ಜಿಲ್ಲೆಯಲ್ಲಿ ಲಕ್ಷ್ಮೀ ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು. 2007ರ ನ.13ರಂದು ಬೆಳಗ್ಗೆ 10 ಗಂಟೆಗೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಕೊರ್ತುಗುಂಡಿ ಚಾರುಬಚ್ಚಲು ಎಂಬಲ್ಲಿ ಕೂಂಬಿಂಗ್​ ನಿರತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಗಿರಿಜನರಿಗೆ ಕಾಡಿನ ಉತ್ಪನ್ನ ಸಂಗ್ರಹಿಸಲು ಅಡ್ಡಿಪಡಿಸುತ್ತಾರೆಂದು ದೂರಿ, 2008ರ ನ.3ರಂದು ರಾತ್ರಿ 9 ಗಂಟೆಗೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಂಜ ಎಂಬಲ್ಲಿ ನಾರಾಯಣ ನಾಯ್ಕ್​ ಅವರ ಮನೆಗೆ ಅಕ್ರಮವಾಗಿ ಬಂದೂಕು ಸಹಿತ ಪ್ರವೇಶಿಸಿ ಕೊಲೆ ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಶಂಕರನಾರಾಯಣ ಠಾಣಾ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಶೇಖರ್​ ಶೆಟ್ಟಿ ಎಂಬವರ ಅಂಗಡಿ ಹಾಗೂ ಪಕ್ಕದ ಮರದಲ್ಲಿ ಎಎನ್ಎಫ್​ ವಿರುದ್ಧ ಕರಪತ್ರ ಹಾಗೂ ಬ್ಯಾನರ್​ ಅಂಟಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಳು. ಪ್ರಸ್ತುತ ಈ ಪ್ರಕರಣ ಅಮಾಸೆಬೈಲು ಠಾಣೆಯ ವ್ಯಾಪ್ತಿಯಲ್ಲಿದೆ.

ಆಂಧ್ರ ಪ್ರದೇಶದಲ್ಲಿ ಕೌಟುಂಬಿಕ ಜೀವನ

ಲಕ್ಷ್ಮೀ ವಿರುದ್ಧ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್​ ಠಾಣೆಯಲ್ಲಿ 2007ರಲ್ಲಿ 1 ಪ್ರಕರಣ ಹಾಗೂ 2008ರಲ್ಲಿ 2 ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳು ಅಮಾಸೆಬೈಲು ಠಾಣೆಯ ವ್ಯಾಪ್ತಿ ಹೊಂದಿದೆ. 2009ರಲ್ಲೇ ಆಂಧ್ರ ಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿದ್ದ ಲಕ್ಷ್ಮೀ, ಮಾಜಿ ನಕ್ಸಲ್​ ಸಂಜೀವ್​ ಅಲಿಯಾಸ್​ ಸಲೀಂ ಎಂಬಾತನನ್ನು ವಿವಾಹವಾಗಿದ್ದಾಳೆ. ಆಂಧ್ರ ಪ್ರದೇಶದಲ್ಲಿಯೇ ಕೌಟುಂಬಿಕ ಜೀವನ ನಡೆಸುತ್ತಿದ್ದಾಳೆ.

ಪತಿ, ಸಹೋದರರ ಸಂತಸ

ನಕ್ಸಲ್​ ಚಟುವಟಿಕೆ ತೊರೆದು ಲಕ್ಷ್ಮೀ ಶರಣಾದ ಹಿನ್ನೆಲೆಯಲ್ಲಿ ಈ ಮೊದಲೇ ಶರಣಾಗಿದ್ದ ಪತಿ ಸಂಜೀವ (ಮಾಜಿ ನಕ್ಸಲ್​) ಸಂತಸ ವ್ಯಕ್ತಪಡಿಸಿದ್ದಾರೆ. 2008ರಲ್ಲಿ ಆಕೆಯನ್ನು ಮದುವೆಯಾಗಿ, ಆಂಧ್ರ ಪ್ರದೇಶದಲ್ಲಿ 2009ರಲ್ಲಿ ರಾಜಶೇಖರ ರೆಡ್ಡಿ ಸಿಎಂ ಆಗಿದ್ದಾಗ ನಾನು ಶರಣಾಗಿದ್ದೆ. ನಾನು ಮೂಲತ: ಪಾವಗಡ ತಾಲೂಕಿನವನು. ಆದರೆ, ಮಾಧ್ಯಮಗಳಲ್ಲಿ ಆಂಧ್ರದವನು ಎಂದು ಬರುತ್ತಿತ್ತು. ಸದ್ಯ ಎಲ್ಲ ಪ್ರಕರಣಗಳಿಂದ ಖುಲಾಸೆಗೊಂಡಿದ್ದೇನೆ. ಆಕೆಯ ಅಕ್ಕ-ಅಣ್ಣ ಕರ್ನಾಟಕ ಸಿಎಂ ಶರಣಾಗತಿಗೆ ಅವಕಾಶ ಕೊಟ್ಟಿದ್ದಾರೆಂದು ತಿಳಿಸಿದ್ದರು. ಅದನ್ನು ಪತ್ನಿ ಲಕ್ಷ್ಮೀಗೆ ತಿಳಿಸಿದಾಗ ಆಕೆ ಶರಣಾಗಿದ್ದಾಳೆ. ನನಗೂ ತುಂಬ ಸಂತಸವಾಗಿದೆ ಎಂದು ಹೇಳಿಕೊಂಡಿದ್ದಾರೆ. ಲಕ್ಷ್ಮೀ ಸಹೋದರ ಹಾಗೂ ಸಹೋದರಿಯರೂ ಮಾಧ್ಯಮದವರೊಂದಿಗೆ ಮಾತನಾಡಿ, ಆಕೆ ನಮ್ಮಮನೆಮಗಳು. ಆಕಸ್ಮಿಕವಾಗಿ ನಕ್ಸಲ್​ ಆಗಿಬಿಟ್ಟಿದ್ದಳು. ಮೊದಲೇ ಗೊತ್ತಿದ್ದರೆ ನಾವು ಬಿಡುತ್ತಿರಲಿಲ್ಲ. ಈಗ ಅವಳು ಶರಣಾಗಿರುವುದು ನಮಗೆಲ್ಲ ಸಂತೋಷವಾಗಿದೆ ಎಂದರು.

ಸರ್ಕಾರ ನಕ್ಸಲರಿಗೆ ಶರಣಾಗಲು ಅವಕಾಶ ಕೊಟ್ಟಿರುವ ವಿಚಾರ ಟಿವಿ ಹಾಗೂ ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿ ನಾನಿಂದು ಶರಣಾಗಿದ್ದೇನೆ. ಯಾರದೇ ಒತ್ತಡ ಇಲ್ಲದೆ ಸ್ವಯಂ ಪ್ರೇರಣೆಯಿಂದ ಶರಣಾಗಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಸಹಾಯ ಮಾಡಬೇಕು. ನಮ್ಮೂರಿಗೆ ಏನೂ ವ್ಯವಸ್ಥೆ ಇಲ್ಲ. ಜನರು ತುಂಬ ಬಡವರಿದ್ದಾರೆ. ರಸ್ತೆ, ಇಲ್ಲ, ಕುಡಿಯುವ ನೀರಿಲ್ಲ, ಶಾಲೆ ಹಾಗೂ ಆಸ್ಪತ್ರೆಯೂ ಇಲ್ಲ. ಜನರಿಗೆ ಎಲ್ಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಸಿಎಂ ಅವರಲ್ಲಿ ಬೇಡಿಕೆ ಇಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೇ ನೆಲೆಸುತ್ತೇನೆ. | ಲಕ್ಷ್ಮೀ ತೊಂಬಟ್ಟು. ಶರಣಾದ ನಕ್ಸಲ್​ ಈದಿನ ಲಕ್ಷ್ಮೀ ತೊಂಬಟ್ಟು ನಕ್ಸಲ್​ ಚಟುವಟಿಕೆ ಬಿಟ್ಟು ಉಡುಪಿ ಜಿಲ್ಲಾಡಳಿತದ ಸಮ್ಮುಖದಲ್ಲಿ ಸರ್ಕಾರಕ್ಕೆ ಶರಣಾಗಿದ್ದಾಳೆ. ಸರ್ಕಾರ ಶರಣಾಗುವ ನಕ್ಸಲರನ್ನು ಎ, ಬಿ, ಸಿ ಎಂದು ಮೂರು ವಿಭಾಗ ಮಾಡಿದ್ದು, ಲಕ್ಷ್ಮೀ ಎ ವಿಭಾಗಕ್ಕೆ ಅನ್ವಯವಾಗುತ್ತಾಳೆ. ಸರ್ಕಾರದ ಪ್ಯಾಕೇಜ್​ನಂತೆ 7 ಲಕ್ಷ ರೂ. ಪರಿಹಾರ ಸಿಗಲಿದ್ದು, ಪ್ರಥಮ ಹಂತದಲ್ಲಿ 3 ಲಕ್ಷ ರೂ. ತಲಾ 1 ವರ್ಷದ ಬಳಿಕ ತಲಾ 2 ಲಕ್ಷ ರೂ. ನೀಡಲಾಗುತ್ತದೆ. ಪುನರ್ವಸತಿಗೆ ಸಂಬಂಧಿಸಿ ತರಬೇತಿ ಪಡೆಯಲು, ಸ್ವಂತ ಉದ್ಯಮ ಆರಂಭಿಸಲು ಅವಕಾಶವಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ ಉಡುಪಿ

ನಕ್ಸಲ್​ ಲಕ್ಷ್ಮೀ ಈದಿನ ಶರಣಾಗಿದ್ದಾಳೆ. ಉಡುಪಿ ಡಿವೈಎಸ್ಪಿ ಎಲ್ಲ ಪ್ರಕ್ರಿಯೆಯ ವರದಿ ಸಿದ್ಧಪಡಿಸಿದ್ದು ಅದನ್ನು ಉಡುಪಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮೂಲಕ ಚರ್ಚಿಸಿ, ವಿಡಿಯೋ ಚಿತ್ರೀಕರಣ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆಕೆಯ ಆರೋಗ್ಯ ತಪಾಸಣೆ ಬಳಿಕ ಕಸ್ಟಡಿಗೆ ಸ್ವೀಕರಿಸಲಾಗುವುದು.

| ಡಾ. ಕೆ.ಅರುಣಕುಮಾರ್​. ಉಡುಪಿ ಎಸ್ಪಿ

ನಮಗೆ ಲಭಿಸಿದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಈಗ ಯಾವುದೇ ಪ್ರಕಾರದ ನಕ್ಸಲ್​ ಚಟುವಟಿಕೆ ಅಥವಾ ನಕ್ಸಲ್​ ಸದಸ್ಯರು, ಸಂಘಟನೆ ಇಲ್ಲ. ಹೀಗಾಗಿ ನಮ್ಮ ರಾಜ್ಯ ನಕ್ಸಲ್​ ಮುಕ್ತ ಎಂದು ಘೋಷಿಸುವ ವಿಚಾರ ಸರ್ಕಾರಕ್ಕೆ ಸಂಬಂಧಿಸಿದೆ. ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ನಕ್ಸಲ್​ ಪ್ರಕರಣ ಇದೆ. ಇವುಗಳ ವಿಚಾರಣೆ ಸದ್ಯ ಬೆಂಗಳೂರಿನ ಎನ್​ಐಎ ಕೋರ್ಟ್​ಗೆ ವರ್ಗಾವಣೆ ಆಗಿದೆ. ಒಟ್ಟಿನಲ್ಲಿ ಯಾವುದಾದರೂ ಒಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. | ಕೆ.ಪಿ. ಶ್ರೀಪಾಲ್​. ನಕ್ಸಲ್​ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net