ಸರ್ಕಾರ ನಗರ ನಕ್ಸಲರ ಕೈಗೊಂಬೆ: ಸುನೀಲ್​ ಕುಮಾರ್​

Published on

ಉಡುಪಿ: ನಗರ ನಕ್ಸಲರು ಈ ದೇಶಕ್ಕೆ ಅತಿ ದೊಡ್ಡ ಅಪಾಯ. ಆದರೆ ರಾಜ್ಯ ಸರ್ಕಾರ ನಗರ ನಕ್ಸಲರ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳೇ ನಗರ ನಕ್ಸಲರ ಬಗ್ಗೆ ಮೃದು ಧೋರಣೆ ವಹಿಸಿದ್ದಾರೆ. ರಾಜಕೀಯದಲ್ಲಿ ಗಾಂಧಿವಾದ ಮುಂದಿಟ್ಟವರು ರಾಜಕೀಯದ ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ ಎಂದು ಮಾಜಿ ಸಚಿವ ಸುನೀಲ್​ ಕುಮಾರ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ನಕ್ಸಲರು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಕಚೇರಿಯನ್ನು ಆವರಿಸಿಕೊಂಡಿದ್ದಾರೆ. ಇದು ರಾಜ್ಯದ ಹಿತದೃಷ್ಟಿಯಿಂದ ಒಳಿತಲ್ಲ. ಮುಖ್ಯಮಂತ್ರಿಗಳ ವಿವೇಚನೆ, ಆಲೋಚನೆ, ಚಟುವಟಿಕೆ, ಚಿಂತನೆ, ನಿರ್ಧಾರ ಅವರದ್ದೇ ಆಗಿರಬೇಕು. ಬದಲಿಗೆ ನಗರ ನಕ್ಸಲರ ಚಿಂತನೆ ಆಗಬಾರದು ಎಂದರು.

ನಕ್ಸಲರ ಶರಣಾಗತಿ ಪ್ರತಿದಿನ ಅನುಮಾನ ಹುಟ್ಟಿಸುತ್ತಿದೆ. ಸಿಎಂ ಮತ್ತು ಗೃಹ ಇಲಾಖೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಗಳು ಟ್ವೀಟ್​ ಮಾಡಿದ ಕೂಡಲೇ ನಕ್ಸಲರಿಗೆ ಆ ಟ್ವೀಟ್​ ಹೇಗೆ ತಲುಪಿತು? ಎಂದು ಮಾಜಿ ಸಚಿವ ವಿ.ಸುನಿಲ್​ ಕುಮಾರ್​ ಪ್ರಶ್ನಿಸಿದ್ದಾರೆ.

15 ದಿನಗಳ ಒಳಗಾದ ಶರಣಾಗತಿಯೂ, ವೇದಿಕೆಯ ಮೇಲೆ ನಡೆದ ನಾಟಕದಂತಿದೆ. ಶರಣಾಗತಿ ವೇಳೆ ಶಸ್ತ್ರಾಸ್ತ್ರ್ರ ಇರಲಿಲ್ಲ. ವಿಕ್ರಂ ಗೌಡನ ಆಡಿಯೋ ಮಾಧ್ಯಮಗಳಲ್ಲಿ ಬಂದಿದ್ದು, ವಿಕ್ರಂ ಗೌಡ ನಾನು ಶರಣಾಗುವುದಿಲ್ಲ ಎಂದು ಹೇಳಿದ್ದಾನೆ. ಶರಣಾಗುವುದಿಲ್ಲ ಎಂದಾಗ ಆತನನ್ನು ಹತ್ಯೆ ಮಾಡಿ ಉಳಿದವರನ್ನು ಶರಣಾಗತಿ ಮಾಡಲಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ಯವು ನಕ್ಸಲ್​ ಮುಕ್ತ ಆಗುತ್ತಿರುವುದು ಸ್ವಾಗತಾರ್ಹ. ಆದರೆ ಶರಣಾಗತಿ ವಿಧಾನ ಸರಿಯಿಲ್ಲ. ಅರಣ್ಯ ಪುನರ್ವಸತಿಗೋಸ್ಕರ ಅರ್ಜಿ ಹಾಕಿ ನೂರಾರು ಜನ ಉಡುಪಿ, ಚಿಕ್ಕಮಗಳೂರು ಶಿವಮೊಗ್ಗದಲ್ಲಿ ಕಾಯುತ್ತಿದ್ದಾರೆ. ಆದರೆ ಪುನರ್ವಸತಿ ಪ್ಯಾಕೇಜಿಗೆ ಹಣ ಬಿಡುಗಡೆ ಮಾಡಿಲ್ಲ. ಪುನರ್ವಸತಿಗೆ ಪ್ಯಾಕೇಜ್​ ಕೊಡದವರು ನಕ್ಸಲರಿಗೆ ಪ್ಯಾಕೇಜ್​ ಕೊಡಲು ಆತುರ ತೋರುತ್ತಿದ್ದಾರೆ. ಇದು ಕಾಡಿನ ನಕ್ಸಲರನ್ನು ನಾಡಿನ ನಕ್ಸಲರನ್ನಾಗಿಸುವ ಪ್ಯಾಕೇಜ್​ ಎಂದು ಕಿಡಿ ಕಾರಿದರು.

ಅಧಿಕಾರ ಒದ್ದು ತೆಗೆದುಕೊಳ್ಳುತ್ತಾರಾ?

ಡಿ.ಕೆ ಶಿವಕುಮಾರ್​ ಅವರಿಗೆ ಅಧಿಕಾರ ಸುಲಭವಾಗಿ ಸಿಗುವುದಿಲ್ಲ, ಡಿಕೆಶಿ ಅಧಿಕಾರವನ್ನು ಒದ್ದು ತೆಗೆದುಕೊಳ್ಳಬೇಕು. ಎಸ್​ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಒದ್ದು ಸಚಿವ ಸ್ಥಾನ ತೆಗೆದುಕೊಂಡಿದ್ದರು. ಸಿದ್ದರಾಮಯ್ಯ ಬೆಂಬಲಿಗರು ಸುಲಭವಾಗಿ ಡಿಕೆಶಿಗೆ ಅಧಿಕಾರ ಕೊಡುವುದಿಲ್ಲ, ಯಾರೇ ಮುಖ್ಯಮಂತ್ರಿಯಾದರು ನಾನು ನನ್ನ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕೇಳುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ಒಂದು ರೂ. ಅನುದಾನ ಕೊಟ್ಟಿಲ್ಲ ಎಂದರು.

ಬಿಜೆಪಿ ತಯಾರಿ

ಸ್ಥಳಿಯ ಸಂಸ್ಥೆ ಚುನಾವಣೆಗೆ ಬಿಜೆಪಿಯಲ್ಲಿ ತಯಾರಿ ಆರಂಭಿಸಲಾಗಿದೆ. ಬಿ.ಎಸ್​. ಯಡಿಯೂರಪ್ಪನವರ ಪ್ರವಾಸದಲ್ಲಿ ರಾಜ್ಯಾದ್ಯಂತ ಕಾರ್ಯಕರ್ತರು ಜೋಡಿಸಿಕೊಳ್ಳುತ್ತಾರೆ. ರಾಜ್ಯಾಧ್ಯಕ್ಷರು ಚುನಾವಣಾ ತಯಾರಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಆಂತರಿಕ ಭಿನ್ನಮತ ವಿಚಾರ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net