ಸೌಂದರ್ಯ ಕಳೆದುಕೊಂಡ ನವಲೂರು ಕೆರೆ

Navalur LAKE
Published on

ವಿಕ್ರಮ ನಾಡಿಗೇರ ಧಾರವಾಡ

ನವಲೂರು ಎಂದಾಕ್ಷಣ ನೆನಪಾಗುವುದೇ ಪೇರಲ ಹಣ್ಣು. ಅದರಲ್ಲೂ ಕೆರೆ ಅಂಗಳದಲ್ಲಿ ಬೆಳೆದ ಹಣ್ಣು ಬಲುರುಚಿ ಎಂಬ ಮಾತಿತ್ತು. ಆದರೆ ಇದೀಗ ಕೆರೆಯೇ ನಿರ್ಲಕ್ಷ್ಯ್ಕೆ ಒಳಗಾಗಿದೆ. ಹಣ್ಣಿನ ರುಚಿ ಹೆಚ್ಚಿಸಿದ್ದ ಶುಚಿಯಾದ ನೀರು ಇಂದು ಪೂರ್ಣ ಕಲುಷಿತಗೊಂಡು ಗಬ್ಬೆದ್ದು ನಾರುತ್ತಿದೆ.

ಇದು ನವಲೂರು ಕೆರೆಯ ಇಂದಿನ ಸ್ಥಿತಿ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗಕ್ಕೆ ಹೊಂದಿಕೊಂಡಿರುವ ಕೆರೆ ಸುಮಾರು 68 ಎಕರೆ ಪ್ರದೇಶದಲ್ಲಿ ವಿಸ್ತೀರ್ಣ ಹೊಂದಿದ್ದು, ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿದೆ.

ಹಿಂದಿನ ವರ್ಷಗಳಲ್ಲಿ ಕೆರೆ ವೈಭವ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬವಾಗಿತ್ತು. ಕೆರೆ ಅಂಗಳಕ್ಕೆ ಬಗೆ ಬಗೆಯ ವಿದೇಶಿ ಹಕ್ಕಿಗಳು ಪ್ರತಿ ವರ್ಷ ಆಗಮಿಸುತ್ತಿದ್ದವು. ಇಂದು ಪಕ್ಷಿಗಳಿರಲಿ, ಗ್ರಾಮದ ದನ, ಕರುಗಳೂ ಅತ್ತ ಸುಳಿಯದಂತಾಗಿದೆ. ಇದು ಪಕ್ಷಿ ಪ್ರೇಮಿಗಳು, ತಜ್ಞರಿಗೂ ಬೇಸರ ತರಿಸಿದೆ. ನಗರ ಪ್ರದೇಶ ಬೆಳೆದಂತೆ, ಕೆರೆ ತನ್ನ ಸೌಂದರ್ಯ ಕಳಚುತ್ತ ಬರುತ್ತಿರುವುದು ದುರಂತವೇ ಸರಿ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಕೆರೆ ಅಭಿವೃದ್ಧಿ ಪಡಿಸಿ, ಒಳನಾಡು ಮೀನುಗಾರಿಕೆಗೆ ಅನುವು ಮಾಡಿಕೊಟ್ಟಿದ್ದರಂತೆ. ಈಗ ಅದ್ಯಾವ ಕುರುಹೂ ಇಲ್ಲ. ಮೇಲಾಗಿ, ಯಾಲಕ್ಕಿಶೆಟ್ಟರ್ ಕಾಲನಿ, ಕೆಇಬಿ ಹೌಸಿಂಗ್ ಸೊಸೈಟಿ, ನವಲೂರು, ನವಲೂರು ಅಗಸಿ, ಹೊಸಯಲ್ಲಾಪುರ ಹಿಂಭಾಗ, ಸೇರಿ ವಿವಿಧ ಕಡೆಗಳಲ್ಲಿನ ಮಲೀನ ನೀರು ಕೆರೆ ಸೇರಿ ಗಬ್ಬು ನಾರುತ್ತಿದೆ. ಕೆರೆ ತುಂಬ ಜಲಕಳೆ ವ್ಯಾಪಿಸಿದ್ದರೂ ಸಮರ್ಪಕ ನಿರ್ವಹಣೆ ಇಲ್ಲವಾಗಿದೆ. ಅಶುದ್ಧ ನೀರು ಕೆರೆ ಸೇರುತ್ತಿರುವುದರಿಂದ ಗ್ರಾಮಸ್ಥರಿಗೆ ಅನೇಕ ರೋಗಗಳು ಕಾಣಿಸುತ್ತಿವೆ. ಕೆರೆ ಪಕ್ಕದಲ್ಲೇ ಇರುವ ಶಾಲೆಯ ಮಕ್ಕಳ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ಈ ಹಿಂದೆ ಪಾಲಿಕೆ ಸದಸ್ಯರು ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಸಕರ ಅನುದಾನದಲ್ಲಿ 2 ಬಾರಿ ಕೆರೆ ಹೂಳೆತ್ತಲಾಗಿದೆ. ಆದರೂ ಕೆರೆ ಮಾತ್ರ ಜಲ ಕಳೆ ಹಾಗೂ ಹೂಳು ತುಂಬಿಕೊಂಡು ನಲುಗುತ್ತಿದೆ. ಕೆರೆ ಸುತ್ತಲಿನ ಹೊಲ, ಗದ್ದೆಗಳ ನೀರು ಮಾತ್ರ ಕೆರೆಗೆ ಸೇರುವಂತೆ ಮಾಡಿದರೆ ಉತ್ತಮ. ಆ ನೀರು ಶುದ್ಧವಾಗಿರುವ ಕಾರಣ ಪಕ್ಷಿ, ಪ್ರಾಣಿ ಸಂಕುಲಕ್ಕೂ ವರದಾನವಾಗಲಿದೆ. ಇದನ್ನು ಒಂದು ಸುಂದರ ಪ್ರವಾಸಿ ತಾಣವಾಗಿ ಸೃಷ್ಟಿಸಲು ಸಾಕಷ್ಟು ಅವಕಾಶವಿದೆ. ಇದಕ್ಕೆ ಸರ್ಕಾರ ಮನಸು ಮಾಡಬೇಕು ಎಂಬುದು ಎಲ್ಲರ ಆಶಯವಾಗಿದೆ.

ಗ್ರಿಲ್ ಹೆಸರಿಗೆ ಮಾತ್ರ

ಕೆರೆಗೆ ತ್ಯಾಜ್ಯ ಎಸೆಯದಿರಲಿ ಎಂಬ ಕಾರಣಕ್ಕೆ ಗ್ರಾಮಕ್ಕೆ ಹೊಂದಿಕೊಂಡಿರುವ ದಡದಲ್ಲಿ ಮಾತ್ರ ಸಣ್ಣ ನೀರಾವರಿ ಇಲಾಖೆಯಿಂದ ಗ್ರಿಲ್ ಅಳವಡಿಸಲಾಗಿದೆ. ಆದರೆ ಇದು ಹೆಸರಿಗೆ ಮಾತ್ರ ಎಂಬಂತಾಗಿದೆ. ಗ್ರಿಲ್ ಅಳ ವಡಿಸಿದ್ದರೂ ಕೆರೆ ಆವರಣದಲ್ಲೇ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಕೆರೆ ವಾತಾವರಣ ಮತ್ತಷ್ಟು ಹದಗೆಡುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಕೆರೆ ಅಭಿವೃದ್ಧಿ ಕುರಿತು ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ 2ನೇ ಹಂತದ ಕಾಮಗಾರಿಗಳಲ್ಲಿ ಕೆರೆ ಅಭಿವೃದ್ಧಿಗೆ ಸಹ ಆದ್ಯತೆ ನೀಡುವಂತೆ ವಿನಂತಿಸಲಾಗಿದೆ. ಈಗಾಗಲೇ ಕೆಲಗೇರಿ ಕೆರೆ ಸಂಪೂರ್ಣ ಅಭಿವೃದ್ಧಿಯಾಗಿದೆ. ಅದೇ ಮಾದರಿಯಲ್ಲಿ ನವಲೂರು ಕೆರೆ ಅಭಿವೃದ್ಧಿಗೆ ಸಹ ಆದ್ಯತೆ ನೀಡುವಂತೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡಲಾಗಿದೆ. | ಡಾ. ಮಯೂರ ಮೋರೆ, ಪಾಲಿಕೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net