

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಆವರಣದಲ್ಲಿನ ಯಾಗ ಶಾಲೆಯಲ್ಲಿ ನವರಾತ್ರಿ ಮಹೋತ್ಸವದ ಎರಡನೇ ದಿನ ದುರ್ಗಾಪೂಜೆ, ಪವಮಾನ ಹೋಮ ಮತ್ತು ಆಶ್ಲೇಷ ಬಲಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಪಶ್ಚಿಮ ಬಂಗಾಳದ ದುರ್ಗಾ ಮಾತೆಯ ಅರ್ಚಕರು ದೀಪ ದೂಪ ಗಂಧ, ಛತ್ರ ಚಾಮರ, ಗಾನ ಗಾಯನ, ಸ್ತುತಿ, ಸ್ವಸ್ಥಿಗಳ ಸಹಿತ ದೇವರನ್ನು ಪೂಜಿಸಿದರು. ಜಾಗಟೆ, ಶಂಖದ ನಾದಗಳನ್ನು ಮೊಳಗಿಸಿ ಉಪಾಸನೆಗೈದರು. ಭಾವ ಪರವಶವಾಗಿ ನೃತ್ಯಾರತಿ ಮಾಡಿ, ಭಕ್ತಿ ಸಮರ್ಪಿಸಿದರು. ಸದ್ಗುರು ಶ್ರೀ ಸತ್ಯಸಾಯಿ ಮಧುಸೂದನ ಸಾಯಿ ಮಾತನಾಡಿ, ಉತ್ತಮ ಜೀವನ ನಿರ್ವಹಣೆಗೆ ಭದ್ರ ಬುನಾದಿ ಇರಬೇಕು. ಭಾರತೀಯ ಪರಂಪರೆಯ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸತ್ವವು ಸರ್ವಕಾಲಕ್ಕೂ ಎಲ್ಲ ಧರ್ಮಗಳಿಗೂ ಅನುಕರಣೆಗೆ ಯೋಗ್ಯ. ಸಮಂಜಸವಾದ ನೀತಿ ಸಂಹಿತೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮತ್ತಿತರರು ಇದ್ದರು.
*ವಿದ್ಯಾರ್ಥಿ ನಿಧಿ ಸಮಾವೇಶ*
ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ರಾಷ್ಟ್ರೀಯ ಸೇವಾ ಭಾರತಿ ವಿದ್ಯಾರ್ಥಿ ನಿಧಿ ಸಮಾವೇಶ ನಡೆಯಿತು. ಕರೋನಾ ಮಹಾಮಾರಿಯ ಹೊಡೆತಕ್ಕೆ ತತ್ತರಿಸಿ, ಅದೆಷ್ಟೋ ಮಕ್ಕಳು ಸರ್ವಸ್ವವನ್ನು ಕಳೆದುಕೊಂಡು ಶಿಕ್ಷಣದಿಂದ ದೂರ ಉಳಿಯುವಂತಾಯಿತು. ಇಂತಹವರಿಗೆ ಪುನರ್ ವಸತಿ ಕಲ್ಪಿಸುವ ದೃಷ್ಟಿಯಿಂದ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿದ್ದು ಮಕ್ಕಳು ಮರಳಿ ಶಾಲೆಗೆ ಸೇರುವ ಅಭಿಯಾನಕ್ಕೆ ಮುನ್ನುಡಿ ಬರೆಯಲಾಗಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರೀಯ ಸೇವಾ ಭಾರತಿ ಕೈಜೋಡಿಸಿದೆ.
*ವಿದ್ಯಾರ್ಥಿ ನಿಧಿ ಸಾಧನೆ*
ವಿದ್ಯಾರ್ಥಿ ನಿಧಿಯಡಿ ರಾಜ್ಯದ 31 ಜಿಲ್ಲೆಗಳಲ್ಲಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ 7800 ವಿದ್ಯಾರ್ಥಿಗಳು ಪ್ರತಿ ತಿಂಗಳು ವಿದ್ಯಾರ್ಥಿ ವೇತನ ಪಡೆಯುತ್ತಿದ್ದು ಇದು ಅವರ ಶಿಕ್ಷಣಕ್ಕೆ ಬಳಕೆಯಾಗುತ್ತಿದೆ. ವಿನಿಯೋಗವಾಗುತ್ತಿದೆ. ವಿದ್ಯಾರ್ಥಿಗಳ ವಿದ್ಯಾ ಪ್ರಗತಿ, ಹಾಜರಾತಿ ಹಾಗೂ ಅಭ್ಯುದಯದ ಪ್ರಗತಿಯನ್ನು ಅವಲೋಕಿಸಲಾಗುತ್ತಿದೆ ಎಂದು ಸಂಟಕರು ಮಾಹಿತಿ ನೀಡಿದ್ದಾರೆ.