

ಪುತ್ತೂರು ಗ್ರಾಮಾಂತರ: ಐತಿಹಾಸಿಕ ಹಿನ್ನಲೆಯಿರುವ ಕಾರಣಿಕ ಶಕ್ತಿಗಳಾದ ದೇಯಿ ಬೈದೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ 9 ದಿನಗಳ ಕಾಲ ನಡೆದ ನವರಾತ್ರಿ ಮಹೋತ್ಸವ ಶನಿವಾರ ರಾತ್ರಿ ವಿಶೇಷ ಪೂಜೆಯೊಂದಿಗೆ ಸಂಪನ್ನಗೊಂಡಿತು.
ವಿಜಯದಶಮಿ ದಿನವಾದ ಶನಿವಾರ ಬೆಳಗ್ಗೆ ಶಿವಾನಂದ ಶಾಂತಿ ಅವರ ಪೌರೋಹಿತ್ಯದಲ್ಲಿ ಶಾರದಾ ಪೂಜೆ, ಮಕ್ಕಳಿಗೆ ಅಕ್ಷರಾಭ್ಯಾಸ, ಅವಳಿ ಮಕ್ಕಳಿಂದ ವಿಶೇಷ ಸೇವೆ, ಮಹಾಪೂಜೆ, ಪುಟಾಣಿಗಳಿಗೆ ಅನ್ನಪ್ರಾಶನ ಬಳಿಕ ಅನ್ನಸಂತರ್ಪಣೆ ನಡೆಯಿತು. ದ.ಕ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಬಂದು ಮಹಾ ಮಾತೆ ದೇಯಿ ಬೈದೆತಿ ಹಾಗೂ ಕ್ಷೇತ್ರದ ಸಾನ್ನಿಧ್ಯಗಳ ದರ್ಶನ ಪಡೆದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಮತ್ತಿತರರು ಉಪಸ್ಥಿತರಿದ್ದರು. ರಾತ್ರಿ ವಿಶೇಷ ಪೂಜೆ ನಡೆಯಿತು.