ಆಲೂರು: ಪುರಾಣ ಪ್ರಸಿದ್ಧ ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯದಲ್ಲಿ ಎರಡು ವರ್ಷಗಳಿಂದ ನಿಂತು ಹೋಗಿದ್ದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ ಎಂದು ಗ್ರಾಮದ ಮುಖಂಡ ವಿನೋದ್ ಚೌಕಿದಾರ್ ತಿಳಿಸಿದ್ದಾರೆ.
ಸುಮಾರು 1200 ವರ್ಷಗಳ ಇತಿಹಾಸವುಳ್ಳ ತಾಲೂಕಿನ ಮರಸು ಗ್ರಾಮದ ಶ್ರೀತಿರುಮಲ ರಂಗನಾಥಸ್ವಾಮಿ ಮತ್ತು ಉಡಿಸಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ, ಹೋಮ ಜಾತ್ರಾ ಮಹೋತ್ಸವ ನಿಂತು ಹೋಗಿದ್ದವು. ಈ ಕುರಿತು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಯಿತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಈ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಮತ್ತು ತಾಲೂಕು ದಂಡಾಧಿಕಾರಿಗಳ ಜತೆ ಚರ್ಚಿಸಿ ಸರ್ಕಾರದ ನಿರ್ದೇಶನದಂತೆ ಪೂಜಾ ಕಾರ್ಯ ನೆರವೇರಿದವು. ಅದರಂತೆ ಇಂದಿನಿಂದ ದೇವಾಲಯದಲ್ಲಿ ನವರಾತ್ರಿ ಉತ್ಸವಗಳು ಪ್ರಾರಂಭಗೊಂಡಿದ್ದು ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.