ನವರಾತ್ರಿ ಉತ್ಸವ ನಾಳೆಯಿಂದ

1 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅನೇಕ ವರ್ಷಗಳಿಂದ ಅದ್ಧೂರಿ ಶರನ್ನವರಾತ್ರಿ ಆಚರಿಸುತ್ತಿರುವ ಇಲ್ಲಿನ ಮಟ್ಟಿ ಪರಪ್ಪನ ಕೂಟದಲ್ಲಿರುವ ಕಟ್ಟಿಮಠ ಅವರ ಪಾರಂಪರಿಕ ಮನೆಯಲ್ಲಿ ಈ ಬಾರಿಯೂ ವೈಭವದ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆದಿದೆ.
ಕಿತ್ತೂರು ಸಂಸ್ಥಾನದ ರಾಜಗುರು ಮನೆತನವಾದ ಕಟ್ಟಿಮಠರ ಸುಮಾರು 200 ವರ್ಷಗಳ ಪುರಾತನ ನಿವಾಸದಲ್ಲಿ ದಸರಾ ವೈಭವ ನಡೆಯಲಿದೆ. ಮನೆಯಲ್ಲೇ ಶಾಶಾಸ್ತ್ರೋಕ್ತವಾಗಿ ದೇವಿ ಆರಾಧನೆ, 9 ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ, ಕಲಾವಿದರಿಗೆ ಗೌರವ, ಹಬ್ಬ-ಉತ್ಸವಗಳ ಮಹತ್ವ ಬಗ್ಗೆ ಜನರಿಗೆ ತಿಳಿವಳಿಕೆ ಹಾಗೂ ಉಪನ್ಯಾಸಗಳು ನಡೆಯಲಿವೆ ಎಂದು ಆಯೋಜಕ ಪ್ರೊ. ವೀರೇಶ ಕಟ್ಟಿಮಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲಿನಿಂದಲೂ ಮನೆಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾರ್ತಿಕ ಕಟ್ಟಿಮಠ ಅದನ್ನು ಮುನ್ನಡೆಸಿದ್ದಾನೆ. ಕಾರ್ತಿಕ ಕಾನ್ಪುರ್​ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದರೂ, ಧಾರ್ಮಿಕ ಆಸಕ್ತಿ ಹೊಂದಿದ್ದಾನೆ. ನವರಾತ್ರಿ ಉತ್ಸವದಲ್ಲಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ, ಅಲಂಕಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಹಲವು ತಿಂಗಳಿಂದ ಸ್ವತಃ ಸಿದ್ಧಪಡಿಸುತ್ತಿದ್ದಾನೆ. 9 ದಿನಗಳ ಕಾಲ ದೇವಿಯ ಅವತಾರ, ದೀಪದ ವ್ಯವಸ್ಥೆಯನ್ನು ಆಸಕ್ತಿ ಹಾಗೂ ಭಕ್ತಿಯಿಂದ ಮಾಡುತ್ತಾನೆ. ದಸರಾ ಹಿನ್ನೆಲೆಯಲ್ಲಿ ನಿತ್ಯ ಕಾರ್ತಿಕ ಸಂಗೀತ ಕಾರ್ಯಕ್ರಮ ಸಹ ನಡೆಸಿಕೊಡುತ್ತಾನೆ ಎಂದರು.
ಈ ಬಾರಿ ಅ. 3, 4ರಂದು ಶ್ರೀ ಕನ್ಯಾಕುಮಾರಿ, ಅ. 5,6 ರಂದು ಕಾಶ್ಮೀರ ಶಾರದಾ, ಅ. 7,8ರಂದು ಶ್ರೀ ಕಾಮಕ್ಯಾ, ಅ. 9, 10ರಂದು ಕಂಚಿ ಶ್ರೀ ಕಾಮಾ, ಅ. 11,12 ವಿಂದ್ಯಾವಾಸಿನಿ ಅವತಾರದಲ್ಲಿ ದೇವಿ ಅಲಂಕೃತಗೊಳ್ಳಲಿದ್ದಾಳೆ ಎಂದರು.
ಕಾರ್ತಿಕ ಕಟ್ಟಿಮಠ ಮಾತನಾಡಿ, ಮೊದಲಿನಿಂದಲೂ ದೇವಿ ಆರಾಧನೆ ನನಗಿಷ್ಟ. ತಿಳಿವಳಿಕೆ ಬಂದಾಗಿನಿಂದ ದೇವಿಗೆ ಅಲಂಕಾರ ಮಾಡಿ ಪೂಜಿಸುತ್ತಿದ್ದೇನೆ. ಈ ಹಿಂದೆ ನಾನು ತೀರ್ಥ, ನವರಸ, ವಾರಾಣಸಿ ಎಂಬ ವಿಷಯಗಳನ್ನು ಆಧರಿಸಿ ತನ್ಮೂಲಕ ಅಂಬೆಯ ಅನೇಕ ತತ್ವಗಳನ್ನು ತಿಳಿಯಲು ಪ್ರಯತ್ನಿಸಿದ್ದೇನೆ. ಕಳೆದ ವರ್ಷ ವಾರಾಣಸಿ ಕ್ಷೇತ್ರವನ್ನು ಆಧರಿಸಿ ದೇವಿಯ ಅನೇಕ ಸ್ವರೂಪ ಹಾಗೂ ತತ್ವ ತಿಳಿದಿದ್ದೇವೆ. ಈ ವರ್ಷ ಅದರ ಮುಂದುವರೆದ ಭಾಗವಾಗಿ ದೇವಿಗೆ ಅಲಂಕಾರ ಮಾಡುತ್ತಿದ್ದೇನೆ ಎಂದರು.
ಪ್ರೊ. ವಿಜಯಲಕ್ಷ್ಮೀ ಕಟ್ಟಿಮಠ, ವೀರಣ್ಣ ಯಳಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net