ನವರಾತ್ರಿ ಉತ್ಸವ ನಾಳೆಯಿಂದ

13 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅನೇಕ ವರ್ಷಗಳಿಂದ ಅದ್ಧೂರಿ ಶರನ್ನವರಾತ್ರಿ ಆಚರಿಸುತ್ತಿರುವ ಇಲ್ಲಿನ ಮಟ್ಟಿ ಪರಪ್ಪನಕೂಟದಲ್ಲಿರುವ ಕಟ್ಟಿಮಠ ಅವರ ಪಾರಂಪರಿಕ ಮನೆಯಲ್ಲಿ ಈ ಬಾರಿಯೂ ವೈಭವದ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆದಿದೆ.
ಕಿತ್ತೂರು ಸಂಸ್ಥಾನದ ರಾಜಗುರು ಮನೆತನವಾದ ಕಟ್ಟಿಮಠರ ಸುಮಾರು 200 ವರ್ಷಗಳ ಪುರಾತನ ನಿವಾಸದಲ್ಲಿ ದಸರಾ ವೈಭವ ನಡೆಯಲಿದೆ. ಮನೆಯಲ್ಲೇ ಶಾಸ್ತ್ರೋಕ್ತವಾಗಿ ದೇವಿ ಆರಾಧನೆ, 9 ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ, ಕಲಾವಿದರಿಗೆ ಗೌರವ, ಹಬ್ಬ-ಉತ್ಸವಗಳ ಮಹತ್ವ ಬಗ್ಗೆ ಜನರಿಗೆ ತಿಳಿವಳಿಕೆ ಹಾಗೂ ಉಪನ್ಯಾಸಗಳು ನಡೆಯಲಿವೆ ಎಂದು ಆಯೋಜಕ ಪ್ರೊ. ವೀರೇಶ ಕಟ್ಟಿಮಠ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲಿನಿಂದಲೂ ಮನೆಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು. ಆದರೆ 15 ವರ್ಷಗಳಿಂದ ಕಾರ್ತಿಕ ಕಟ್ಟಿಮಠ ಅದನ್ನು ಮುನ್ನಡೆಸಿದ್ದಾನೆ. ಕಾರ್ತಿಕ ಕಾನ್ಪುರ್ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದರೂ, ಧಾರ್ಮಿಕ ಆಸಕ್ತಿ ಹೊಂದಿದ್ದಾನೆ. ನವರಾತ್ರಿ ಉತ್ಸವದಲ್ಲಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ, ಅಲಂಕಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಹಲವು ತಿಂಗಳಿಂದ ಸ್ವತಃ ಸಿದ್ಧಪಡಿಸುತ್ತಿದ್ದಾನೆ. 9 ದಿನಗಳ ಕಾಲ ದೇವಿಯ ಅವತಾರ, ದೀಪದ ವ್ಯವಸ್ಥೆಯನ್ನು ಆಸಕ್ತಿ ಹಾಗೂ ಭಕ್ತಿಯಿಂದ ಮಾಡುತ್ತಾನೆ. ದಸರಾ ಹಿನ್ನೆಲೆಯಲ್ಲಿ ನಿತ್ಯ ಕಾರ್ತಿಕ ಸಂಗೀತ ಕಾರ್ಯಕ್ರಮ ಸಹ ನಡೆಸಿಕೊಡುತ್ತಾನೆ ಎಂದರು.
ಈ ಬಾರಿ ವಾರಾಣಸಿ ಮಾದರಿ ನಿರ್ಮಿಸುತ್ತಿರುವುದು ವಿಶೇಷ. ಅ. 15ರಂದು ಕಾಶಿಕಾ, ಅ. 16ರಂದು ಸಂಕಟಾ ಜೀ, ಅ. 17ರಂದು ರಂಗಭರಿ, ಅ. 18ರಂದು ವಿಶಾಲಾಕ್ಷಿ-ವಿಶ್ವನಾಥ, ಅ. 19ರಂದು ಬಿಂದು ಮಾಧವ, ಅ. 20ರಂದು ಮನೀಷಾ, ಅ. 21ರಂದು ಭೀಮಾ ಚಂಡಿ, ಅ. 22ರಂದು ಮಣಿಕರ್ಣಿಕಾ, ಅ. 23ರಂದು ಹಾಗೂ 24ರಂದು ಅನ್ನಪೂಣಾ ಅವತಾರದಲ್ಲಿ ದೇವಿ ಅಲಂಕೃತಗೊಳ್ಳಲಿದ್ದಾಳೆ ಎಂದರು.
ಕಾರ್ತಿಕ ಕಟ್ಟಿಮಠ ಮಾತನಾಡಿ, ಕಾಶಿ ಪ್ರಾಚೀನ ಕಾಲದ್ದು, ವಿದ್ವಾಂಸರು, ಜ್ಞಾನಿಗಳು ಇದ್ದ ಸ್ಥಳ. ಅಲ್ಲಿನ ದೇವಸ್ಥಾನಗಳೇ ಅದ್ಭುತ. ವಾರಾಣಸಿ ಶಿವಮಯ ಆಗಿದ್ದರೂ ಅಲ್ಲಿ ದೇವಿ ಉಕ್ತಿ ನಡೆಯಲಿದೆ. ಇದೇ ಕಾರಣಕ್ಕೆ ಅಲ್ಲಿನ ವೈಭವವನ್ನು ಸ್ಥಳೀಯರಿಗೆ ಪರಿಚಯಿಸುವ ಪ್ರಯತ್ನ ಇದಾಗಿದೆ. ಕಳೆದ ವರ್ಷ ದಸರಾ ಮುಗಿದ ಬಳಿಕವೇ ತಯಾರಿ ಶುರು ಮಾಡಿದ್ದು, 2-3 ಬಾರಿ ವಾರಣಾಸಿಗೆ ಭೇಟಿ ನೀಡಿದ್ದೇನೆ ಎಂದರು.
ನಿತ್ಯ ರುದ್ರಾಭಿಷೇಕ, ರಾಜೋಪಚಾರಪೂರ್ವಕ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಕೊನೇ ದಿನ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀಗಳ ಸಾನ್ನಿಧ್ಯದೊಂದಿಗೆ ನವರಾತ್ರಿ ಸಂಪನ್ನಗೊಳ್ಳಲಿದೆ. ಅಂದು ಸಾರ್ವಜನಿಕರಿಗೆ ಮಹಾ ಪ್ರಸಾದ ವ್ಯವಸ್ಥೆ ಸಹ ಇರಲಿದೆ ಎಂದರು.
ಪ್ರೊ. ವಿಜಯಲಕ್ಷ್ಮೀ ಕಟ್ಟಿಮಠ, ವೀರಣ್ಣ ಯಳಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net