

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನೇಕರು ಪ್ರತಿ ವರ್ಷದಂತೆ ಮನೆಯಲ್ಲಿ ಆಕರ್ಷಕ ದಸರಾ ಬೊಂಬೆಗಳನ್ನು ಕೂರಿಸಿ, ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ದೇವಾನು ದೇವತೆಗಳು, ಸ್ವಾತಂತ್ರ ಹೋರಾಟಗಾರರು, ಪ್ರಾಣಿ ಪಕ್ಷಿಗಳು, ರಾಜ ಮಹಾರಾಜರ ಸಂಸ್ಥಾನ, ಮಹಾಕಾವ್ಯ ರಾಮಾಯಾಣ ಮತ್ತು ಮಹಾಭಾರತದ ಚಿತ್ರಣ, ಆಕರ್ಷಕ ಹೂವುಗಳ ಜತೆಗೆ ವಿದ್ಯುದಿಪಾಲಂಕಾರದ ಆಕರ್ಷಕ ದೃಶ್ಯಗಳು ಕಂಡು ಬರುತ್ತಿವೆ. ಮೈಸೂರಿನಲ್ಲಿ ನಾಡ ಉತ್ಸವ ಅಂಗವಾಗಿ ನಡೆಯುತ್ತಿರುವ ವಿಶೇಷ ಪೂಜಾ ಮತ್ತು ಸಾಂಸತಿಕ ಕಾರ್ಯಕ್ರಮಗಳು, ರಾಜ್ಯದ ಗಮನ ಸೆಳೆಯುತ್ತಿರುವುದರ ನಡುವೆ ಜಿಲ್ಲೆಯಲ್ಲಿನ ಹಲವರು ದಸರಾ ಬೊಂಬೆ ಪ್ರದರ್ಶನದ ಮೂಲಕ ಸಂಭ್ರಮಿಸುತ್ತಿದ್ದಾರೆ. ಪರಸ್ಪರ ಆಕರ್ಷಕ ಅಲಂಕಾರ, ಆಧ್ಯಾತ್ಮಿಕ, ರಾಷ್ಟ್ರೀಯತೆ, ಗ್ರಾಮೀಣ, ಕಲೆ, ಸಾಮಾಜಿಕ ಪ್ರತಿಬಿಂಬದ ಒಳ್ಳೆಯ ಸಂದೇಶಗಳ ಮೂಲಕ ಸುತ್ತಲಿನವರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ ಸುರೇಶ್ ಎಂಬುವರ ಮನೆಯಲ್ಲಿ ಹಲವು ವರ್ಷಗಳಿಂದಲೂ ಮನೆ ದಸರಾವನ್ನು ಆಚರಿಸಲಾಗುತ್ತಿದೆ. ಶ್ರೀಕೃಷ್ಣ, ಗಣಪತಿ, ಗೌರಿ, ನಟರಾಜ್, ವೆಂಕಟೇಶ್ವರ ಸ್ವಾಮಿ, ಶಿರಡಿ ಬಾಬಾ, ಆಂಜನೇಯ ಸೇರಿದಂತೆ ದೇವರ ಹಲವು ಮೂರ್ತಿಗಳನ್ನಿಟ್ಟು ಪೂಜಿಸಲಾಗುತ್ತಿದೆ. ಹಾಗೆಯೇ ಮಕ್ಕಳ ಅಚ್ಚು ಮೆಚ್ಚಿನ ಮಿಕ್ಕಿ ಮೌಸ್, ಪ್ರಾಣಿ ಪಗಳು, ಆಟಿಕೆಗಳು ಗಮನ ಸೆಳೆಯುತ್ತಿವೆ. ಪುರಾಣ ಕತೆಗಳನ್ನು ಹೇಳುವಂತೆ ಶ್ರೀ ವಿಷ್ಣುವಿನ ದಶಾವತಾರ, ನವದುರ್ಗೆಯ ಅವತಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
*ಎಲ್ಲೆಡೆ ದಸರಾ ಸಂಭ್ರಮ
ನವರಾತ್ರಿ ಹಬ್ಬಗಳ ಆಚರಣೆಯಲ್ಲಿ ಹೆಚ್ಚಿಗೆ ಸಂಭ್ರಮವನ್ನು ಕಾಣುವ ಪ್ರದೇಶಗಳಲ್ಲಿ ಜಿಲ್ಲೆಯು ಸಹ ಹಿಂದೆ ಬಿದ್ದಿಲ್ಲ. ಹಲವು ದಶಕಗಳಿಂದಲೂ ರೂಢಿಸಿಕೊಂಡು ಬಂದಿರುವ ಪದ್ದತಿಯನ್ನು ಕುಟುಂಬಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಸುತ್ತಲಿನ ಜನರ ಸಹಭಾಗಿತ್ವದಲ್ಲಿ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರ ಮನೆಯಲ್ಲೂ ದಸರಾ ಬೊಂಬೆಗಳ ಪ್ರದರ್ಶನವು ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ಸುಮಾರು 500 ಕ್ಕೂ ಅಧಿಕ ಬೊಂಬೆಗಳು ಮನೆಯ ಇಡೀ ಹಾಲ್ ಅನ್ನು ಆವರಿಸಿಕೊಂಡಿದ್ದು ದೇವರುಗಳ ಜತೆಗೆ ಮಹಾತ್ಮ ಗಾಂಧೀಜಿ, ನೆಹರೂ, ಸುಭಾಷ್ ಚಂದ್ರ ಬೋಸ್, ಭಾರತ ಮಾತೆ ಮತ್ತು ಭುವನೇಶ್ವರಿ ಮೂರ್ತಿಗಳ ಪ್ರತಿಷ್ಠಾಪನೆಯು ದೇಶಭಕ್ತಿ ಮತ್ತು ಸಾಂಪ್ರದಾಯಿಕ ಆಚರಣೆಯ ಸಮ್ಮಿಲನದ ಮಹತ್ವವನ್ನು ಸಾರಲಾಗುತ್ತಿದೆ.
*ಪ್ರತಿನಿತ್ಯ ವಿಶೇಷ ಪೂಜೆ
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಕ್ತಿದೇವತೆಗಳು ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇಲ್ಲಿನ ಬೆಸ್ಕಾಂ ಆವರಣದ ಚಾಮುಂಡೇಶ್ವರಿ ಅಮ್ಮನವರ ದೇವಾಲಯವು ವಿದ್ಯುದಿಪಾಲಂಕಾರಗಳಿಂದ ಝಗಮಗಿಸುತ್ತಿವೆ. ಪ್ರತಿನಿತ್ಯ ವಿಶೇಷ ಅಭಿಷೇಕ, ಅಲಂಕಾರದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಸುಮಂಗಲಿಯರು ಆರತಿ ಬೆಳಗಿ, ಹರಕೆಯನ್ನು ಹೊರುತ್ತಿದ್ದಾರೆ.