

ವಿಜಯಪುರ : ಗುಮ್ಮಟನಗರಿ ವಿಜಯಪುರ ಸೇರಿದಂತೆ ಜಿಲ್ಲೆಯಲ್ಲಿ ನಾಡಹಬ ದಸರಾ ಪ್ರಯುಕ್ತ ಸೋಮವಾರ ನವರಾತ್ರಿ ಮಹೋತ್ಸವದ ನಿಮಿತ್ತ ದೇವಿಯ ಪ್ರತಿಷ್ಠಾಪನೆ ಹಾಗೂ ಭವ್ಯ ಮೆರವಣಿಗೆ ನಡೆಯಿತು. ಮುತ್ತೈದೆಯರು ಕುಂಭಮೇಳ ಹೊತ್ತು ಮೆರವಣಿಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಇಲ್ಲಿನ ತೊರವಿ ರಸ್ತೆ ನಿಂಬರಗಿ ಬಡಾವಣೆಯ ವಿಷ್ಣುಸಹಸ್ರ ನಾಮ ಭವನದ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಸೋಮವಾರ ವಿಶೇಷ ಪೂಜೆ ಕೈಗೊಳ್ಳಲಾಯಿತು. ದೇವಸ್ಥಾನದ ಧರ್ಮದರ್ಶಿ ಪಂಡಿತ್ ವೇದನಿಧಿ ಆಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ 5ಕ್ಕೆ ಸುಪ್ರಭಾತ, ತೋಮಲ ಸೇವೆ, ನಿರ್ಮಾಲ್ಯ ವಿಸರ್ಜನೆ, ಅರುಣೋದಯ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಬೆಳಗ್ಗೆ 7ರಿಂದ 9ರವರೆಗೆ ವಿದ್ವಾಂಸರಿಂದ ವೇದ ಪಾರಾಯಣ ನಡೆಯಿತು. ಬಳಿಕ ವಿಷ್ಣು ಸಹಸ್ರನಾಮಾವಳಿ ಅರ್ಚನೆ, 10ಕ್ಕೆ ವೈಭವದ ಕಲ್ಯಾಣೋತ್ಸವ ಜರುಗಿತು. ಮಧ್ಯಾಹ್ನ 12ಕ್ಕೆ ನೈವೇದ್ಯ ಮಹಾಮಂಗಳಾರತಿ ತೀರ್ಥ ಪ್ರಸಾದ ನಡೆದವು. ವಿವಿಧ ಭಜನಾ ಮಂಡಳಿಗಳಿಂದ ನಡೆದ ಸಾಮೂಹಿಕ ಭಜನೆ, ಕೋಲಾಟ ಜನಮನ ಸೆಳೆಯಿತು.
ಸಂಜೆ ಪಂಡಿತ್ ಅಜೀತಾಚಾರ್ಯ ಹನಗಂಡಿ ಅವರಿಂದ ವೆಂಕಟೇಶ ಮಹಾತ್ಮೆ ಪ್ರವಚನ, ಸಂಗೀತ ಕಾರ್ಯಕ್ರಮ, ವಾಹನ ಸೇವೆ ಅಷ್ಟಾವಧಾನ ಸೇವೆ, ಉಂಜಲ (ತೊಟ್ಟಿಲು) ಸೇವೆ ಹಮ್ಮಿಕೊಳ್ಳಲಾಯಿತು. ಪಂಡಿತ್ ಸತ್ಯವರಾಚಾರ್ಯ ಜೋಶಿ ದೇವರಿಗೆ ವಿಶೇಷ ಅಲಂಕಾರ ನೆರವೇರಿಸಿದರು.
ಡಾ.ಉಪೇಂದ್ರ ನರಸಾಪೂರ, ಆನಂದ ಜೋಶಿ, ಆರ್.ಕೆ.ದೇಸಾಯಿ, ಜಯತೀರ್ಥ ಕಿರಸೂರ, ಸಂತೋಷ ಕುಲಕರ್ಣಿ ಸತ್ತಿ, ಆರ್.ಜಿ.ದೇಸಾಯಿ, ಪ್ರಹ್ಲಾದ ಬಾಗೇವಾಡಿ, ಮಧ್ವಾಚಾರ್ಯ ಜೋಶಿ, ವಿಜಯೀಂದ್ರ ಮೊಖಾಶಿ, ಶ್ರೀನಿವಾಸ ಕುಲಕರ್ಣಿ, ರಾಘವೇಂದ್ರ ಪುರೋಹಿತ, ಬಾಬುರಾವ ಕುಲಕರ್ಣಿ ಇತರರು ಭಾಗವಹಿಸಿದ್ದರು.
ಮಠಪತಿಗಲ್ಲಿಯಲ್ಲಿ ನಾಡದೇವಿ ಪ್ರತಿಷ್ಠಾಪನೆ
ಇಲ್ಲಿನ ಮಠಪತಿ ಗಲ್ಲಿಯಲ್ಲಿ ಶ್ರೀ ಆದಿಶಕ್ತಿ ತರುಣ ಮಂಡಳಿ ವತಿಯಿಂದ ದಸರಾ ಅಂಗವಾಗಿ ನಾಡದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಪಂಚಲೋಹದಿಂದ ನಿರ್ಮಿಸಿರುವ ದೇವಿ ಮೂರ್ತಿ ಸ್ಥಾಪನೆ ಹಾಗೂ 500 ಸುಮಂಗಲೆಯರಿಂದ ಕುಂಭ ಮೆರವಣಿಗೆ ನಡೆಯಿತು.
ಕಳೆದ 1963ರಿಂದ ಈ ವರೆಗೆ ನಾಡದೇವಿಯ ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದು, ಪ್ರಸಕ್ತ ವರ್ಷ 60ನೇ ವರ್ಷದ ವಿಶೇಷವಾಗಿ ಪಂಚ ಲೋಹದ ಮೂರ್ತಿಯನ್ನು ಕಾರ್ಕಳದ ಪ್ರಸಿದ್ಧ ಶಿಲ್ಪಿ ಶರತ್ ಆಚಾರ್ಯ ಅವರು ಪಂಚಲೋಹದ ವಿಗ್ರಹವನ್ನು ನಿರ್ಮಿಸಿದ್ದು ವಿಶೇಷ.
ಬೆಳಗ್ಗೆ 9 ಗಂಟೆಗೆ 770 ಲಿಂಗದ ಗುಡಿಯಿಂದ ಕುಂಭಮೇಳದೊಂದಿಗೆ ಮೆರವಣಿಗೆ ನಡೆಯಿತು. ಕಾಖಂಡಕಿಯ ಕರಡಿ ಮಜಲು, ಡೊಳ್ಳು ಕುಣಿತ, ಸಕಲ ವಾದ್ಯಮೇಳದೊಂದಿಗೆ ಹೊರಟು ಕೋಟೆಗೋಡೆಯ ಮುಖಾಂತರ ಸಿದ್ಧೇಶ್ವರ ದೇವಸ್ಥಾನದ ಮಾರ್ಗವಾಗಿ ರಾಮ ಮಂದಿರ ನಂತರ ಮಠಪತಿಗಲ್ಲಿಗೆ ತಲುಪಿ ಮಧ್ಯಾಹ್ನ 12ಗಂಟೆಗೆ ಸಿದ್ದಯ್ಯ ಹಿರೇಮಠರಿಂದ ಸಕಲ ಪೂಜೆಯೊಂದಿಗೆ ಪ್ರತಿಷ್ಠಾಪನೆಗೊಂಡಿತು.
ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಎಸ್.ಬಿಜ್ಜರಗಿ, ಚಿದಾನಂದ ಆಲಗೊಂಡ, ನಾಗಪ್ಪ ಸಜ್ಜನ, ಶಿವಾನಂದ ಜಂಗಮಶೆಟ್ಟಿ, ಅನಿಲ ಹಮಿತಖಾನೆ, ಶಿವಾನಂದ ಮದಭಾವಿ, ಮಲ್ಲಯ್ಯ ಗಣಾಚಾರಿ, ಶಿವಾನಂದ ಸಜ್ಜನ, ಸನ್ನಿ ಗವಿಮಠ ಹಾಗೂ ಗಿರೀಶ ರುದ್ರಗೌಡರ ಮುಂತಾದವರು ಉಪಸ್ಥಿತರಿದ್ದರು.