

ಹೊನ್ನಾಳಿ: ಸ್ವಾಮೀಜಿಗಳಲ್ಲಿ ಸಾಮರಸ್ಯ ಇದೆ. ಜನರಲ್ಲೂ ಈ ಮನೋಭಾವ ಬರಬೇಕು. ಆಗ ಗ್ರಾಮಗಳಲ್ಲಿ ಸದ್ವಿಚಾರ, ಸತ್ಕಾರ್ಯಗಳಿಗೆ ದಾರಿಯಾಗಲಿದೆ ಎಂದು ಹೊಸದುರ್ಗದ ಕನಕ ಗುರುಪೀಠದ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಕೆರೆ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ನವೀಕರಣದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಸಂಕುಚಿತತೆ ಬಿಟ್ಟು ಸಾಮರಸ್ಯದೆಡೆಗೆ ಸಾಗಬೇಕು. ಆಗ ಗ್ರಾಮಗಳಲ್ಲಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಜೀವನ ನಡೆಸಲು ಸಾಧ್ಯ ಎಂದರು.
ಗ್ರಾಮಸ್ಥರು ಜಾತ್ಯತೀತವಾಗಿ ದೇವಸ್ಥಾನ ನವೀಕರಣ ಮಾಡಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇಂತಹ ಸಾಮರಸ್ಯ ಸತ್ಕಾರ್ಯಗಳು ಪ್ರತಿ ಗ್ರಾಮದಲ್ಲೂ ನಡೆಯಬೇಕು. ಅರಕೆರೆ ಗ್ರಾಮ ತಾಲೂಕಿಗೆ ಮಾದರಿಯಾಗಲಿ ಎಂದು ಹೇಳಿದರು.
ಮನುಷ್ಯ ಸಂಘಜೀವಿ. ಆತ ಒಬ್ಬಂಟಿಯಾಗಿ ಬದುಕು ಸಾಧ್ಯವಿಲ್ಲ. ಆದ್ದರಿಂದ ಇತರರಿಗೆ ಪರೋಪಕಾರ ಮಾಡಬೇಕು. ಆಗ ಮಾತ್ರವೇ ದೇವರು ನಿಮ್ಮನ್ನು ಕಷ್ಟಕಾಲದಲ್ಲಿ ಕಾಯುತ್ತಾನೆ ಎಂದು ತಿಳಿಸಿದರು.
ಕಬ್ಬಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಹೃದಯದಲ್ಲಿ ಭಗವಂತನನ್ನು ನೆಲೆಸುವಂತೆ ಮಾಡಿ ಭಕ್ತಿ ಸಮರ್ಪಣೆ ಮಾಡಬೇಕು. ಅದಕ್ಕೆ ಹಿರಿದು ಕಿರಿದು ಭೇದವಿಲ್ಲ. ಹಾಲುಮತದ ಸಮಾಜದವರ ಮನಸ್ಸು ಹಾಲಿನಂತೆ. ಸೇವಾ ಮನೋಭಾವವುಳ್ಳ ಈ ಸಮುದಾಯವನ್ನು ಇತರ ಸಮಾಜದವರು ಹೆಚ್ಚು ಗೌರವ ತೋರುತ್ತಾರೆ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಪ್ರತಿಫಲಾಪೇಕ್ಷೆ ಬಯಸದೆ ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡುವವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಗ್ರಾಮದಲ್ಲಿ ಸಾಮರಸ್ಯ ಬೆಸೆಯುವ ದೇವಸ್ಥಾನದ ನವೀಕರಣ ಕಾರ್ಯ ಮಾಡಿದ್ದೀರಿ. ಇಂತಹ ಪ್ರೇರಣೆ ಎಲ್ಲ ಗ್ರಾಮಸ್ಥರಿಗೂ ಸಿಗುವಂತಾಗಲಿ ಎಂದರು.
ರಾಜಕೀಯ ಹಾಗೂ ಚುನಾವಣೆ ಹೊರತಾಗಿ ನಾನು, ರೇಣುಕಾಚಾರ್ಯ ಇಬ್ಬರೂ ಸ್ನೇಹಿತರೆ. ಆದರೆ, ಚುನಾವಣೆ ಬಂದಾಗ ಮಾತ್ರ ನಾವು ಬದ್ಧವೈರಿಗಳಂತೆ ಚುನಾವಣೆಯಲ್ಲಿ ಸೆಣಸಾಡುತ್ತೇವೆ ಎಂದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಜೀವನದಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಲು ಭಗವಂತ ಹಾಗೂ ಮಠಾಧೀಶರ ಆಶೀರ್ವಾದ ಮುಖ ಎಂದು ಹೇಳಿದರು.
ರಾಜಕಾರಣಿಗಳು ಕತ್ತರಿಯಾದರೆ, ಮಠಾಧೀಶರು ಸಮಾಜವನ್ನು ಒಂದುಗೂಡಿಸುವ ಸೂಜಿದಾರ ಆಗಿದ್ದಾರೆ. ಅವರು ಸಮಾಜ ಒಂದು ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದರು.
ಉಪ ತಹಸೀಲ್ದಾರ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಶಾಸಕ ಬಿ.ಪಿ.ಹರೀಶ್, ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಎಚ್.ಎ. ಉಮಾಪತಿ, ಚನ್ನಗಿರಿ ಕುರುಬ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರಗೌಡ, ಮಧುಗೌಡ, ಬಿಜೆಪಿ ಮುಖಂಡ ಎ.ಬಿ.ಹನುಮಂತಪ್ಪ, ಹುರುಳಿ ರಾಜು, ಎಚ್.ಬಿ.ಅಣ್ಣಪ್ಪ, ಲೋಹಿತ್‌ಕುಮಾರ್, ಬೀರಲಿಂಗೇಶ್ವರ ಕಮಿಟಿ ಸದಸ್ಯರಾದ ಹನುಮಂತಪ್ಪ, ಬೀರೇಂದ್ರಕುಮಾರ್, ಮಂಜು, ದೊಡ್ಡೇಶ್, ರೇವಣ್ಣಸಿದ್ದಪ್ಪ ಇತರರಿದ್ದರು.