ಮಾದಕ ವಸ್ತುವಿಗೆ ದಾಸರಾಗುತ್ತಿರುವ ಮಕ್ಕಳು: ಶಾಸಕ ರವಿಕುಮಾರ್ ಗಣಿಗ ಆತಂಕ

Navjeevan Samiti Members' Convention Mandya
Published on

ಮಂಡ್ಯ: ಇತ್ತೀಚೆಗೆ ಮಕ್ಕಳು ಡ್ರಗ್ಸ್, ಗಾಂಜಾಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಅವರ ಮೇಲೆ ಪಾಲಕರು ನಿಗಾ ವಹಿಸಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಿದರೆ ಮನೆಗೆ ದಾರಿ ದೀಪವಾಗುತ್ತಾರೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಡೆದ ಗಾಂಧಿಸ್ಮತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಅದೇ ರೀತಿ ಹೆಣ್ಣು ಮಕ್ಕಳು ಪೊರಕೆ ಹಿಡಿದು ನಿಂತರೆ ಮಾತ್ರ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸಾಧ್ಯ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ತಡೆಗಟ್ಟಲು ಸಾಧ್ಯವಿಲ್ಲ. ಇಂದಿನ ಪರಿಸ್ಥಿತಿಗೆ ಇದು ವಾಸ್ತವಾಂಶವಾಗಿದೆ ಎಂದು ಹೇಳಿದರು.

ಜಿಲ್ಲೆಯ ಹಳ್ಳಿಗಳಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಮದ್ಯ, ಗಾಂಜಾ, ಡ್ರಗ್ಸ್ ಮಾರಾಟ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಮಹಿಳೆಯರಿಂದ ಮಾತ್ರ ಸಾಧ್ಯ. ಗಾಂಧಿಯವರು ಹಳ್ಳಿಗಳಲ್ಲಿ ಸಾರಾಯಿ ನಿಷೇಧ ಮಾಡಿದರು. ಅದಕ್ಕೆ ತದ್ವಿರುದ್ಧವಾಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ಮಾರಾಟ ಹೆಚ್ಚಾಗಿದೆ. ಇನ್ನೊಂದೆಡೆ ಜನರಿಗೆ ಜಾಗೃತಿ ಮೂಡಿಸಿದರೂ ಅಕ್ರಮ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಸಂಸಾರಗಳನ್ನು ಉಳಿಸಲು ಸರ್ಕಾರ ಸಾರಾಯಿ, ಲಾಟರಿ ನಿಷೇಧ ಮಾಡಿದೆ. ಎಷ್ಟೇ ನಿಯಂತ್ರಣ ಮಾಡಿದರೂ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥಸ್ವಾಮೀಜಿ ಮಾತನಾಡಿದ, ಇಂದಿನ ಯುವಜನಾಂಗ ದುಶ್ಚಟಗಳ ದಾಸರಾಗಿ 20ರ ವಯೋಮಾನದವರೂ ವ್ಯಸನಗಳಿಗೆ ಬಲಿಯಾಗಿರುವುದು ನೋವಿನ ಸಂಗತಿ. ಭಾರತ ಇಂದು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವದ ಎದುರು ವಿಫುಲವಾಗಿ ಬೆಳೆದು ನಿಂತಿದೆ. ಇದನ್ನು ಸಹಿಸದ ವಿದೇಶಿ ಶಕ್ತಿಗಳು ನಶೆಯುಕ್ತ ಸಾಮಗ್ರಿಗಳನ್ನು ವಿಮಾನದ ಮೂಲಕ ದೇಶದ ಯುವ ಜನಾಂಗಕ್ಕೆ ತಲುಪಿಸಿ ರೋಗಗ್ರಸ್ಥರನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂದಿನ ಯುವಜನತೆ ಐಷಾರಾಮಿ ಬದುಕಿಗೆ ಮಾರುಹೋಗಿ ಶ್ರಮದ ಜೀವನವನ್ನು ತ್ಯಜಿಸಿದ್ದಾರೆ. ಸನ್ಮಾರ್ಗ ಮತ್ತು ಧಾರ್ಮಿಕತೆಗೆ ಬೆನ್ನು ತೋರಿರುವ ಯುವಜನರು ಗಾಂಧೀಜಿ, ಭಗತ್‌ಸಿಂಗ್, ರಾಜ್‌ಗುರು ಅವರಂತಹ ನಿಸ್ವಾರ್ಥ ದೇಶಪ್ರೇಮಿಗಳು ತಂದುಕೊಟ್ಟ ಸ್ವಾತಂತ್ರ್ಯದ ಅರ್ಥವನ್ನು ಕಳೆಯುತ್ತಿದ್ದಾರೆ. ಇಂದಿನ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುವ ಪ್ರೌವೃತ್ತಿಯಿಂದ ದೂರವಾಗುತ್ತಿದ್ದಾರೆ. ಇದು ಅಪಾಯದ ಸಂಸ್ಕೃತಿ. ಭವಿಷ್ಯದಲ್ಲಿ ದುಡಿಯುವ ಶಕ್ತಿ ದೇಶದಲ್ಲಿ ಮರೆಯಾಗಲಿದೆ ಎಂದು ಎಚ್ಚರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಡಾ.ವೀರೇಂದ್ರ ಹೆಗ್ಗಡೆ ಅವರು ಸಂವಿಧಾನದ ಆಶಯಗಳಾದ ಜಾತ್ಯಾತೀತ, ಧರ್ಮಾತೀತ, ಪ್ರದೇಶಾತೀತ, ಲಿಂಗಾತೀತ ಹಾಗೂ ಭಾಷಾತೀತ ಅಭಿವೃದ್ಧಿಗೆ ಸಹಕಾರಿಯಾಗುವ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆ ಪೂರಕವಾಗಿದೆ. ಅವರ ಯೋಜನೆಗಳ ಫಲಶೃತಿಗೆ ಶ್ರಮಿಸುತ್ತಿರುವ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರ ಸೇವೆ ಅಪರಿಮಿತ ಎಂದು ಬಣ್ಣಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹನುಮಂತಯ್ಯ ಕೊಣನೂರು, ಉಪಾಧ್ಯಕ್ಷ ಎಂ.ಎಸ್.ಶ್ರೀಕಂಠಸ್ವಾಮಿ, ಕೋಶಾಧಿಕಾರಿ ಬಿ.ಚಂದ್ರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯಂತ್ ಪೂಜಾರಿ, ಜಿಲ್ಲಾ ಯೋಜನಾಧಿಕಾರಿ ಚೇತನಾ, ತಾಲೂಕು ಸಂಯೋಜನಾಧಿಕಾರಿ ಸುರೇಶ್‌ಶೆಟ್ಟಿ, ಸುಜಾತಾ ಕೃಷ್ಣ, ತಗ್ಗಹಳ್ಳಿ ವೆಂಕಟೇಶ್, ಬೋರೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net