ಗೋಕರ್ಣದಲ್ಲಿ ನವಧಾನ್ಯ ಉತ್ಸವ

5 GKN 2
Published on

ಗೋಕರ್ಣ: ಕ್ಷೇತ್ರದ ಪರಂಪರೆಯಂತೆ ನವರಾತ್ರಿ ಮೂರನೇ ದಿನ ಶನಿವಾರ ಮಂದಿರದ ಪ್ರಧಾನ ಅರ್ಚಕ ವೇ.ಶ್ರೀನಿವಾಸ ಅಡಿ ನೇತೃತ್ವದಲ್ಲಿ ಶ್ರೀ ಮಹಾಬಲೇಶ್ವರ ದೇವರ ನವಧಾನ್ಯ ಹರಣೋತ್ಸವ ವಿಜೃಂಭಣೆಯಿಂದ ಸಂಪನ್ನವಾಯಿತು.

ಪ್ರಾತಃಕಾಲದಲ್ಲಿ ಬಾವಿಕೊಡ್ಲದ ದೇವರಗದ್ದೆಯಲ್ಲಿ ಹೊಸದಾಗಿ ಬೆಳೆದ ಭತ್ತದ ಪೈರಿಗೆ ಧಾನ್ಯಲಕ್ಷ್ಮೀ ಪೂಜೆಯ ನಂತರ ಬಂಕಿಕೊಡ್ಲದಲ್ಲಿನ ಮಿರ್ಜಾನ ಸೀಮೆ ನಾಡಕರ್ಣಿ ಮನೆತನದಲ್ಲಿ ಮಂದಿರದ ಉಪಾಧಿವಂತ ವೇ.ನಾಗರಾಜ ಜೋಗಭಟ್ಟ ಮತ್ತು ಉಪಾಧಿವಂತ ವೈದಿಕರ ಮಾರ್ಗದರ್ಶನದಲ್ಲಿ ಶ್ರೀ ಮಹಾಬಲೇಶ್ವರ ಪಾದುಕೆಗೆ ನವಧಾನ್ಯವನ್ನು ಸಮರ್ಪಿಸಿ ಅಮಿತ ನಾಡಕರ್ಣಿ ಆಗಮೋಕ್ತವಾದ ಪೂಜಾರಾಧನೆ ಕೈಗೊಂಡರು.

ಮಿರ್ಜಾನ್ ಸೀಮೆ ವತಿಯಿಂದ ಹಿರಿಯರಾದ ವಿವೇಕ ನಾಡಕರ್ಣಿ, ಅರುಣ ನಾಡಕರ್ಣಿ, ಅಶೋಕ ನಾಡಕರ್ಣಿ, ಬಾವಿಕೊಡ್ಲ ಗ್ರಾಮದ ದೇವರಗದ್ದೆಯ ಹೊಸಕ್ಕಿ ಗೌಡರ ಕುಟುಂಬದವರು ಮತ್ತು ಸಮಸ್ತ ಸೀಮಾ ಭಕ್ತರು ಪಾಲ್ಗೊಂಡಿದ್ದರು. ಬಂಕಿಕೊಡ್ಲದಿಂದ ಶ್ರೀದೇವರ ಉತ್ಸವವು ಮಂದಿರಕ್ಕೆ ತಿರುಗಿ ಬರುವ ವೇಳೆ ಮಾರ್ಗದುದ್ದಕ್ಕೂ ಭಕ್ತರು ಶ್ರೀ ದೇವರಿಗೆ ಮಂಗಳಾರತಿ ಬೆಳಗಿ ಹೊಸ ಭತ್ತದ ಪೈರನ್ನು ಪ್ರಸಾದವಾಗಿ ಸ್ವೀಕರಿಸಿದರು. ಮಂದಿರ ಸಮಿತಿಯ ವೇ.ಸುಬ್ರಹ್ಮಣ್ಯ ಅಡಿ, ಉಪಾಧಿವಂತರಾದ ವೇ.ಮಹಾಬಲೇಶ್ವರ ಭಡ್ತಿ, ಶೇಷಾನಂದ ಅಡಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net