

ಉಡುಪಿ: ಹಿಮಾಚಲ ಪ್ರದೇಶದ ಪ್ರವಾಸೀ ಕ್ಷೇತ್ರವಾದ ಶಿಮ್ಲಾದ ಪುರಾತನ ಗೆಯಿಟೀ ಥಿಯೇಟರ್ನಲ್ಲಿ ಆಲ್ ಇಂಡಿಯಾ ಆರ್ಟಿಸ್ಟ್ ಅಸೋಸಿಯೇಷನ್ (ಎಐಎಎ) ಇತ್ತೀಚೆಗೆ ಆಯೋಜಿಸಿದ್ದ 69ನೇ ವರ್ಷದ ರಾಷ್ಟ್ರೀಯ ಮಟ್ಟದ ಹಿಂದಿ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ನವಸುಮ ರಂಗಮಂಚ್ ಕೊಡವೂರು ರಂಗತಂಡ ಪ್ರದರ್ಶಿಸಿದ ದೌಣಿ ಹಿಂದಿ ನಾಟಕ ಪ್ರಥಮ ಬಹುಮಾನ ಗಳಿಸಿದೆ.
ನಾಲ್ಕು ವರ್ಷದ ಹಿಂದೆ ಇಲ್ಲಿಯೇ ನಡೆದಿದ್ದ 65ನೇ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ್ ತಂಡವು ಒಂದು ಬೊಗಸೆ ನೀರು ನಾಟಕವನ್ನು ಹಿಂದಿಯಲ್ಲಿ (ಅಂಜಲಿ ಬರ್ ಪಾನಿ) ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿತ್ತು. ಇದೀಗ ಎರಡನೇ ಬಾರಿ ಶೈಲೀಕೃತ ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿದೆ. ಅಲ್ಲದೆ, ಅಶ್ವತ್ಥಾಮ ಪಾತ್ರಧಾರಿ ಬಾಲಕೃಷ್ಣ ಕೊಡವೂರು ಅವರಿಗೆ ಅತ್ಯುತ್ತಮ ನಟ, ದ್ರೌಪದಿ ಪಾತ್ರಧಾರಿ ಚಂದ್ರಾವತಿ ಪಿತ್ರೋಡಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಮೂಲ ದೌಣಿ ನಾಟಕವನ್ನು ಬಾಲಕೃಷ್ಣ ಕೊಡವೂರು ರಚಿಸಿ ನಿರ್ದೇಶಿಸಿದ್ದು, ಡಾ. ಮಾಧವಿ ಭಂಡಾರಿ ಹಿಂದಿಗೆ ಅನುವಾದಿಸಿದ್ದಾರೆ. ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕಿ ಅಕ್ಷತಾರಾಜ್ ಪೆರ್ಲ ರಂಗಪಠ್ಯ ರಚಿಸಿದ್ದಾರೆ. ಜಯಶೇಖರ್ ಮಡಪ್ಪಾಡಿ ಬೆಳಕಿನ ವಿನ್ಯಾಸ ಮಾಡಿದ್ದು, ರೋಹಿತ್ ಮಲ್ಪೆ ಸಂಗೀತ ನೀಡಿದ್ದಾರೆ.